ಜಿಲ್ಲೆ

ಕೈ ಉತ್ಸಾಹ ಕುಂದಿಸಿದ ನಾಮನಿರ್ದೇಶನ ವಿಳಂಬ

ಸ್ಥಳೀಯ ಕಾಂಗ್ರೆಸಿಗರಲ್ಲಿ ನಿರಾಸೆ | ಹಾಲಿ, ಮಾಜಿ ಶಾಸಕರ ಬಣಗಳ ನಡುವೆ ಹಂಚಿಕೆ ಕಷ್ಟ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶನ ಸ್ಥಾನಗಳನ್ನು ಭರ್ತಿ ಮಾಡಲು ಸರ್ಕಾರ ವಿಳಂಬ ಧೋರಣೆ ತೋರುತ್ತಿದೆ. ಇದು ಸ್ಥಳೀಯ ಕಾಂಗ್ರೆಸಿಗರಲ್ಲಿ ನಿರಾಸೆ ಉಂಟು ಮಾಡಿದೆ.

ತಾಲೂಕಿನ ನಗರ ಯೋಜನಾ ಪ್ರಾಧಿಕಾರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸೇರಿ ವಿವಿಧ ದೇವಾಲಯಗಳ ಸಮಿತಿಗಳಿಗೆ ನಾಮನಿರ್ದೇಶಿತ ಸ್ಥಾನಗಳನ್ನು ಈವರೆಗೆ ಭರ್ತಿ ಮಾಡಿಲ್ಲ. ತಮ್ಮದೇ ಪಕ್ಷದ ಸರ್ಕಾರ ಅಧಿಕಾರಲ್ಲಿರುವುದರಿಂದ ಯಾವುದಾದರೊಂದು ಸಮಿತಿಯಲ್ಲಿ ಸ್ಥಾನ ಸಿಗಬಹುದೆಂದು ಕಾಂಗೆಸ್ ಕಾರ್ಯಕರ್ತರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರ ಬಣಗಳ ನಡುವೆ ಸ್ಥಾನಗಳನ್ನು ಹಂಚಿಕೆ ಮಾಡುವುದು ಕಷ್ಟಕರವಾಗಿದ್ದು, ಈ ವಿಷಯಕ್ಕೆ ಕೈಹಾಕಿದರೆ ಅಗ್ನಿಕುಂಡಕ್ಕೆ ಕೈಹಾಕಿದಂತೆ ಎಂಬುದನ್ನು ಅರಿತ ಸರ್ಕಾರ ಯಾವುದೇ ಸ್ಥಾನಗಳನ್ನು ಭರ್ತಿ ಮಾಡದೆ ದಿನದೂಡುತ್ತಿದೆ.

ಹಿಂದುಳಿದ ಸಮುದಾಯಕ್ಕೆ ಮಣೆ:

ಮುಂಬರುವ ನಗರಸಭೆ ಚುನಾವಣೆಯಲ್ಲಿ ಪ್ರಮುಖವಾದ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸ್ಥಾನವನ್ನು ನಗರದಲ್ಲಿ ರಾಜಕೀಯವಾಗಿ ಬಲಿಷ್ಠವಾಗಿರುವ ಹಿಂದುಳಿದ ಸಮುದಾಯಕ್ಕೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಈಗಾಗಲೇ ಕಾಂಗ್ರೆಸ್ ಪಕ್ಷದಿಂದ 3 ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಆರ್.ಪಿ.ಗೋಪಿನಾಥ್ ಅವರನ್ನು ನೇಮಕ ಮಾಡಬೇಕೆಂಬ ಒತ್ತಡ ಹೆಚ್ಚಿದೆ. ಉಳಿದಂತೆ ಗ್ಯಾರಂಟಿ ಸಮಿತಿ ಹಾಗೂ ವಿವಿಧ ದೇವಾಲಯಗಳ ಸಮಿತಿಗಳಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ಕಲ್ಪಿಸಿದಲ್ಲಿ ಪಕ್ಷ ಕಟ್ಟಿ ಬೆಳೆಸಲು ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.

ಪಕ್ಷನಿಷ್ಠರಿಗೆ ಮನ್ನಣೆ ಬೇಕು:

ಹಾಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರ ಶಿಫಾರಸಿನ ಮೇರೆಗೆ ಕೆಲವು ನಾಮನಿರ್ದೇಶನ ಸ್ಥಾನಗಳನ್ನು ಅವರ ಬೆಂಬಲಿಗರಿಗೆ ನೀಡಲಾಗಿದೆ. ಆದ್ದರಿಂದ ಉಳಿದ ಸ್ಥಾನಗಳನ್ನು ಕಾಂಗ್ರೆಸ್‌ಗೆ ನಿಷ್ಠರಾಗಿರುವ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಮೇಲೆ ಒತ್ತಡ ಹೇರಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶನ ನೇಮಕ ವಿಚಾರದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದ ಪಕ್ಷದ ಅಭ್ಯರ್ಥಿ ರಕ್ಷಾರಾಮಯ್ಯ ಕೂಡ ಮಧ್ಯ ಪ್ರವೇಶಿಸಿದ್ದಾರೆ. ಹಾಲಿ ಹಾಗೂ ಮಾಜಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೇಮಕ ಮಾಡುವ ಕಾರ್ಯವನ್ನು ಜಿಲ್ಲಾಧ್ಯಕ್ಷ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮಾಡಬೇಕಿದೆ.