ಬಾಗಲಕೋಟೆ: ಜಿಟಿಜಿಟಿ ಮಳೆಯಿಂದ ಕಾಡಿದ್ದ ಹಳದಿ ರೋಗ, ಬಳಿಕ ಪ್ರವಾಹ ಎದುರಿಸಿ ಹೆಸರು ಬೆಳೆದಿರುವ ರೈತರಿಗೆ ಈಗ ಬೆಲೆ ಕುಸಿತದ ಬರೆ ಬಿದ್ದಿದೆ.
ಕಳೆದ ವರ್ಷ ಕ್ವಿಂಟಾಲ್ ಹೆಸರಿಗೆ 11 ಸಾವಿರ ರೂ. ಇದ್ದ ಬೆಲೆ ಇದೀಗ 8 ಸಾವಿರಕ್ಕೆ ಕುಸಿತ ಕಂಡಿರುವುದು ಹೆಸರು ಬೆಳೆಗಾರರನ್ನು ಆತಂಕದ ಕೂಪಕ್ಕೆ ತಳ್ಳಿದೆ.
ಕಳೆದ ವರ್ಷ ಭೀಕರ ಬರದಿಂದಾಗಿ ಹೆಸರು ಬೆಳೆ ಅಷ್ಟಕ್ಕಷ್ಟೆ ಬಂದಿತ್ತು. ಆದರೆ, ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಸಿಕ್ಕಿತ್ತು. ಈ ಸಲ ಸಾಕಷ್ಟು ತೊಂದರೆ, ತಾಪತ್ರೆಗಳ ನಡುವೆ ಹೆಸರು ಫಸಲು ಉತ್ತಮವಾಗಿ ಬಂದಿದ್ದು, ರೈತರು ಕಟಾವು ಮಾಡಿ ಮಾರುಕಟ್ಟೆಗೆ ದಾಸ್ತಾನು ತರುತ್ತಿದ್ದಂತೆ ಬೆಲೆ ಕುಸಿತ ಕಂಡು ಆಘಾತ ಉಂಟು ಮಾಡಿದೆ. ಹೆಸರು ಕಾಳು ವಹಿವಾಟಿನ ಪ್ರಮುಖ ಎಪಿಎಂಸಿಗಳಲ್ಲಿ ಒಂದಾಗಿರುವ ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸದ್ಯ ಪ್ರತಿ ದಿನ 1 ಸಾವಿರ ಕ್ವಿಂಟಾಲ್‌ನಿಂದ 3 ಸಾವಿರ ಕ್ವಿಂಟಾಲ್‌ನಷ್ಟು ದಾಸ್ತಾನು ಆವಕ ಆಗುತ್ತಿದೆ. ಜುಲೈ 27 ರಂದು ಹೆಸರು ಕಾಳಿಗೆ ಕ್ವಿಂಟಾಲ್‌ಗೆ ಮಾದರಿ ಬೆಲೆ 9 ಸಾವಿರ ರೂ. ಇದ್ದಿದ್ದು, ಬುಧವಾರ (ಆ.14) ಮಾದರಿ ಬೆಲೆ 7500 ರೂ.ಗೆ ಇಳಿಕೆ ಆಗಿದೆ.
ಪ್ರತಿದಿನವೂ ಹೆಸರು ಕಾಳಿನ ಬೆಲೆ ಏರುಪೇರು ಆಗುತ್ತಿದ್ದು, ಸದ್ಯದ ಸ್ಥಿತಿಯಲ್ಲಿ ಕಳೆದ ವರ್ಷದಂತೆ ಕ್ವಿಂಟಾಲ್‌ಗೆ 11 ಸಾವಿರ ಗಡಿ ದಾಟುವುದಿಲ್ಲ ಎಂದು ವ್ಯಾಪಾರಸ್ಥರು ಅಭಿಪ್ರಾಯ ಪಡುತ್ತಾರೆ. 8682 ರೂ.ಬೆಂಬಲ ಬೆಲೆ : ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕ್ವಿಂಟಾಲ್ ಹೆಸರು ಕಾಳಿಗೆ 8682 ರೂ. ನಿಗದಿಪಡಿಸಿದೆ. ಆದರೆ, ಈ ವರೆಗೂ ಖರೀದಿ ಕೇಂದ್ರವನ್ನು ಮಾತ್ರ ಆರಂಭಿಸಿಲ್ಲ.
15 ದಿನಗಳಿಂದ ಮಾರುಕಟ್ಟೆಗೆ ಹೆಸರುಕಾಳು ಬರುತ್ತಿದೆ. ಇನ್ನೊಂದು ತಿಂಗಳು ಕಳೆದರೆ ರೈತರು ತಾವು ಬೆಳೆದಿದ್ದ ಹೆಸರು ಕಾಳು ಮಾರಾಟ ಮಾಡುತ್ತಾರೆ. ಆ ಬಳಿಕ ಕೇಂದ್ರ ತೆರೆದರೆ ಅದರ ಲಾಭ ಬಹುತೇಕವಾಗಿ ರೈತರಿಗೆ ಸಿಗದೆ ರೈತರ ಹೆಸರಿನಲ್ಲಿ ಇನ್ನಾೃರೋ ಅದರ ಲಾಭ ಪಡೆಯುವ ಸ್ಥಿತಿ ಎದುರಾಗುತ್ತದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 26,300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ : ಜಿಲ್ಲೆಯಲ್ಲಿ ಈ ವರ್ಷ 26300 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಆಗಿದೆ.
ಜುಲೈ ತಿಂಗಳು ಅಂತ್ಯದಲ್ಲಿ ಉಂಟಾದ ಪ್ರವಾಹದಿಂದ ನದಿ ತೀರದ ಪ್ರದೇಶದಲ್ಲಿ 700 ಹೆಕ್ಟೇರ್ ಪ್ರದೇಶ ಹೆಸರು ಬೆಳೆ ನಾಶವಾಗಿದೆ. ಇನ್ನು ಹಳದಿ ರೋಗಕ್ಕೆ ಸಿಕ್ಕು ಕೆಲವು ಪ್ರದೇಶದಲ್ಲಿ ಇಳುವರಿ ಕುಸಿತವಾಗಿದೆ. ಮುಖ್ಯವಾಗಿ ಬಾಗಲಕೋಟೆ, ರಾಂಪುರ ಹೋಬಳಿಯಲ್ಲಿ ಜುಲೈನಲ್ಲಿ 10 ರಿಂದ 15 ದಿನ ಬಿಸಿಲು ಬೀಳದೆ ವಾತಾವರಣದಲ್ಲಿ ಉಂಟಾದ ವೈಪರಿತ್ಯದ ಪರಿಣಾಮ ಇಳುವರಿ ಬಹಳಷ್ಟು ಕುಸಿತವಾಗಿದೆ. ನಾಲ್ಕು ಎಕರೆ ಬಿತ್ತನೆ ಮಾಡಿದ್ದೆ, 50 ಸಾವಿರ ರೂ. ಖರ್ಚು ಮಾಡಿದ್ದೇನೆ. ಇದೀಗ ಬರೀ ಒಂದು ಚೀಲ(ಒಂದು ಕ್ವಿಂಟಾಲ್) ಮಾತ್ರ ಬಂದಿದೆ ಎಂದು ಬೆನಕಟ್ಟಿ ಗ್ರಾಮದ ರೈತ ರಂಗಣ್ಣ ಬೆಣ್ಣೂರ ನೋವಿನಿಂದ ಹೇಳಿದರು. ಹೆಕ್ಟೇರ್‌ಗೆ 40,700 ರೂ. ಖರ್ಚು: ಒಂದು ಹೆಕ್ಟೇರ್ ಹೆಸರು ಬೆಳೆ ತೆಗೆಯಲು ಬಿತ್ತನೆಯಿಂದ ಮಾರುಕಟ್ಟೆಗೆ ತಲುಪಿಸುವವರೆಗೆ 40,700 ರೂ. ಖರ್ಚು ಆಗುತ್ತದೆ. ಹೆಕ್ಟೇರ್‌ಗೆ ಸರಾಸರಿ 7.5 ರಿಂದ 8 ಕ್ವಿಂಟಾಲ್ ಇಳುವರಿ ಬರುತ್ತದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಸದ್ಯ ಬೆಂಬಲ ಬೆಲೆಗಿಂತ ಕಡಿಮೆ ಬೆಲೆ ಇರುವುದರಿಂದ ಫಸಲು ಬಂದರೂ ಲಾಭ ಬರುವುದು ಅಷ್ಟಕ್ಕಷ್ಟೆ ಎಂದು ರೈತರು ಹೇಳುತ್ತಾರೆ.
3 ಲಕ್ಷ ಕ್ವಿಂಟಾಲ್ ವಹಿವಾಟು: ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉತ್ತಮ ಹಂಗಾಮು ನಡೆದರೆ 3 ಕ್ವಿಂಟಾಲ್ ಹೆಸರು ಕಾಳು ಬರುತ್ತದೆ. ಕಳೆದ ವರ್ಷ ಬರ ಇದ್ದಿದ್ದರಿಂದ ಮಾರುಕಟ್ಟೆಗೆ ಬಂದಿದ್ದು ಹಾಗೂ ನೇರವಾಗಿ ಖರೀದಿ ಮಾಡಿರುವುದು ಸೇರಿದರೆ ಅಂದಾಜು 50 ಸಾವಿರ ಕ್ವಿಂಟಾಲ್ ಮಾತ್ರ. ಈ ಸಲ ಬಾಗಲಕೋಟೆ ಹಾಗೂ ಇತರ ಜಿಲ್ಲೆಗಳಲ್ಲೂ ಹೆಸರು ಬಿತ್ತನೆ ಉತ್ತಮ ಆಗಿದ್ದು, 3 ಲಕ್ಷ ಕ್ವಿಂಟಾಲ್ ದಾಸ್ತಾನು ಬರಬಹುದು ಎನ್ನುವ ಅಂದಾಜಿದೆ ಎನ್ನುತ್ತಾರೆ ಹೆಸರು ಖರೀದಿದಾರ ಮುರುಗೇಶ ನಾಗರಾಳ.
ಬಾಗಲಕೋಟೆ ಎಪಿಎಂಸಿಗೆ ಒಂದು ಲಕ್ಷ ಕ್ವಿಂಟಾಲ್ ಹೆಸರುಕಾಳು ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಕಳೆದ ವರ್ಷ 19500 ಕ್ವಿಂಟಾಲ್ ಮಾತ್ರ ಬಂದಿತ್ತು. ಈಗ ಬಾಗಲಕೋಟೆ ಎಪಿಎಂಸಿಯಲ್ಲಿ ಬುಧವಾರ ಕ್ವಿಂಟಾಲ್‌ಗೆ 2700 ರಿಂದ ಗರಿಷ್ಠ 8588 ರೂ. ಮಾರಾಟ ಆಗಿದ್ದು, 7500 ರೂ. ಮಾದರಿ ಬೆಲೆ ಆಗಿದೆ. ಜುಲೈ ಮಧ್ಯದಿಂದ ಈವರೆಗೆ 23,142 ಕ್ವಿಂಟಾಲ್ ಹೆಸರುಕಾಳು ಆವಕ ಆಗಿದೆ. ಇನ್ನು ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಕೇಂದ್ರ ಆರಂಭಿಸುವಂತೆ ಆ.16 ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
-ವಿ.ಡಿ.ಪಾಟೀಲ ಕಾರ್ಯದರ್ಶಿ, ಎಪಿಎಂಸಿ ಬಾಗಲಕೋಟೆ