ಬೆಂಗಳೂರು: ಜನರ ಅಹವಾಲುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆ.ಆರ್.ಪುರದಲ್ಲಿ ನಡೆದ ‘ಬಾಗಿಲಿಗೆ ಬಂತು ಸರಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾತ್ರ ಜನರ ಮನೆ ಬಾಗಿಲಿಗೆ ಬಂದಿಲ್ಲ. ಬದಲಾಗಿ ಎಲ್ಲ ಇಲಾಖೆಗಳ ಅಧಿಕಾರಿ ವರ್ಗದವರು, ಪಕ್ಷಾತೀತವಾಗಿ ಜನಪ್ರತಿನಿಧಿಗಳ ಸಮೇತ ಇಡೀ ಸರ್ಕಾರವನ್ನೇ ಜನರ ಮನೆ ಬಾಗಿಲಿಗೆ ಕರೆತರಲಾಗಿದೆ ಎಂದರು.
ಎಲ್ಲ ಅರ್ಜಿಗಳನ್ನು ಒಂದೇ ದಿನ ಪರಿಹಾರ ಮಾಡಲು ಸಾಧ್ಯವಾಗದು. ಕುಡಿಯುವ ನೀರು, ರಸ್ತೆ, ಒಳಚರಂಡಿ, ಸ್ವಚ್ಛತೆ ಕುರಿತ ದೂರುಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುವುದು. ಇದರ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ವೈಯಕ್ತಿಕ ಅಹವಾಲುಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ನಾಗರಿಕರ ಜತೆಗೆ ಎರಡೂ ಕ್ಷೇತ್ರಗಳ ಶಾಸಕರು ಪ್ರತ್ಯೇಕವಾಗಿ ತಮ್ಮ ಮನವಿ ನೀಡಿದ್ದಾರೆ. ಆಯಾ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಧರಿಸಿ ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುವುದು. ಉಳಿದಂತೆ ಬೇರೆ ಮನವಿಗಳನ್ನು ಹಂತ, ಹಂತವಾಗಿ ಬಗೆಹರಿಸಲಾಗುವುದು ಎಂದು ಡಿಸಿಎಂ ವಿವರಿಸಿದರು.