ಜಿಲ್ಲೆ

ಶಿಕ್ಷಣದಲ್ಲಿ ಉದಾತ್ತ ಚಿಂತನೆಗಳು ಕಣ್ಮರೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಶಿಕ್ಷಣದಲ್ಲಿ ಉದಾತ್ತ ಚಿಂತನೆಗಳು ಮರೆಯಾಗುತ್ತಿವೆ. ಇದುವೇ ಮಾನವೀಯ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಪ್ರೊ.ಎನ್.ಟಿ.ಪ್ರಭಾಕರ್ ಕಳವಳ ವ್ಯಕ್ತಪಡಿಸಿದರು.


ವಿವೇಕಾನಂದ ಭಾರತೀಯ ಅಧ್ಯಯನ ಸಂಸ್ಥೆ ವತಿಯಿಂದ ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಆಯೋಜಿಸಿದ್ದ ‘ಸಮಾಜ ಕಲ್ಯಾಣದ ಆಡಳಿತ’ ಕುರಿತಾದ ವಿಚಾರಸಂಕಿರಣದಲ್ಲಿ ಮಾತನಾಡಿದರು.


ಶೈಕ್ಷಣಿಕ ಪಠ್ಯಕ್ರಮದಿಂದಲೇ ಉದಾತ್ತ ಚಿಂತನೆಗಳು ಕಣ್ಮರೆಯಾಗುತ್ತಿವೆ. ಆ ಜಾಗದಲ್ಲಿ ಮಾಹಿತಿ ಶಿಕ್ಷಣವೇ ಆವರಿಸಿಕೊಂಡಿದೆ. ಮಾಹಿತಿಗಾಗಿಯೇ ಶಿಕ್ಷಣ ಎಂಬಂತಾಗಿದೆ. ಮೌಲ್ಯ ನೇಪಥ್ಯಕ್ಕೆ ಸರಿಯುತ್ತಿದೆ. ಇದಕ್ಕೆ ಶಿಕ್ಷಣ ವ್ಯವಸ್ಥೆ, ಉಪನ್ಯಾಸಕರು ಅಥವಾ ಪಾಲಕರ ತಪ್ಪೋ ತಿಳಿಯದಾಗಿದೆ ಎಂದರು.


ಧರ್ಮ ಎಂದರೆ ಕರ್ತವ್ಯ ಪಾಲನೆ. ಒಬ್ಬರು ಒಂದೊಂದು ಜವಾಬ್ದಾರಿ, ಸ್ಥಾನಮಾನದ ಪರಿಪಾಲನೆ ಮಾಡಬೇಕು. ಆಗಲೇ ಸಮಾಜ ಸುಭಿಕ್ಷವಾಗಲಿದೆ. ಧರ್ಮದ ಕುರಿತು ಬೇರೆ ಬೇರೆ ಅಭಿಪ್ರಾಯ, ವ್ಯಾಖ್ಯಾನ ಮಾಡಲಾಗುತ್ತಿದೆ. ಇದುವೇ ದೌರ್ಭಾಗ್ಯದ ಸಂಗತಿ. ಭಾರತೀಯ ಪ್ರಜ್ಞೆಯನ್ನು ಎತ್ತಿಹಿಡಿಯುವುದೇ ಧರ್ಮ. ಆಚಾರ-ವಿಚಾರ, ತೀರ್ಥ, ಪೂಜೆ, ಪುನಸ್ಕಾರಗಳೆಲ್ಲ ಧರ್ಮವಲ್ಲ ಎಂದರು.


ಆಡಳಿತ ವ್ಯವಸ್ಥೆಯಲ್ಲಿ ತೆರಿಗೆ ವ್ಯವಸ್ಥೆ ಜನಪರವಾಗಿರಬೇಕು. ಹೂವಿನ ರಸವನ್ನು ದುಂಬಿಗಳು ಹೀರಿದಂತೆ ಜನರಿಗೆ ಹೊರೆಯಾಗದಂತೆ ತೆರಿಗೆ ಸ್ವೀಕರಿಸಬೇಕು. ಅದುವೇ 6ನೇ ಒಂದು ಭಾಗದಷ್ಟು ಮಾತ್ರ ಇರಬೇಕು. ಆದರೀಗ ಬುದ್ಧಿವಂತಿಕೆ, ಜಾಣತನದಿಂದ ತೆರಿಗೆ ತೆಗೆದುಕೊಳ್ಳಲಾಗುತ್ತಿದೆ ಎಂದರು.


ನಗರವಾಸಿಗಳ ನಡೆ ಪರಿಸರಕ್ಕೆ ವಿರುದ್ಧವಾಗುತ್ತಿದೆ. ಅವರ ಸುತ್ತಮುತ್ತಲಿನ ವಾತಾವರಣವನ್ನೂ ಪರಿಸರಕ್ಕೆ ವ್ಯತರಿಕ್ತವಾಗಿಯೇ ನಿರ್ಮಿಸಿಕೊಳ್ಳುತ್ತಿದ್ದಾರೆ. ಮನೆ ಮುಂದೆ ಗಿಡಮರ ನೆಡದಂತೆ ಕಾಂಕ್ರಿಟ್ ಹಾಕಿಕೊಂಡು ಕಾರ್‌ಗಳ ನಿಲುಗಡೆಗೆ ಅವಕಾಶ ಮಾಡಿಕೊಂಡಿರುತ್ತಾರೆಯೇ ಹೊರತು, ಗಿಡಗಳಿಗೆ ಅಲ್ಲಿ ಅವಕಾಶ ಇಲ್ಲ. ಇದು ಒಂದು ನಿದರ್ಶನವಷ್ಟೆ. ಇಂತಹ ಹತ್ತಾರು ಪರಿಸರ ವಿರೋಧಿ ನಡೆಗಳಿವೆ. ಇದು ಸರಿಯಲ್ಲ. ಪ್ರತಿಯೊಬ್ಬರೂ ಪರಿಸರ ಸ್ನೇಹಿಯಾಗಿಯೇ ಬದುಕು ಕಟ್ಟಿಕೊಳ್ಳಬೇಕು ಎಂದರು.


ಗ್ರಾಸ್ ರೂಟ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಬಸವರಾಜ ಆರ್.ಶ್ರೇಷ್ಠ, ನಿರ್ದೇಶಕಿ ರೇಖಾ ಷಣ್ಮುಖ, ವಿಭಾಗದ ಮುಖ್ಯಸ್ಥ ಡಾ. ಕೃಷ್ಣ ಹೊಂಬಾಳೆ ಇತರರಿದ್ದರು.