ಮಾನ್ವಿಯ ಧ್ಯಾನ ಮಂದಿರದಲ್ಲಿ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮಿಗಳು ಚಾಲನೆ ನೀಡಿದರು. ಕಲ್ಮಠದ ವಿರೂಪಾಕ್ಷಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿ, ಶಂಕ್ರಯ್ಯಸ್ವಾಮಿ ಸುವರ್ಣಗಿರಿಮಠ, ಕಲ್ಲಪ್ಪ ಶಿರಕೋಳ, ಛತ್ರಪತಿ ಶಿವಾಜಿ ಯುವಸೇನೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಬೆಂಗಳೂರಿನ ಹರಿಕಾ ಮಂಜುನಾಥ ಇದ್ದರು. 
ಜಿಲ್ಲೆ

ಛತ್ರಪತಿ ಶಿವಾಜಿ ಹಿಂದು ಧರ್ಮ ಸಂರಕ್ಷಕ

ಮಾನ್ವಿ: ಭಾರತ ದೇಶಕ್ಕೆ ಮಿತಿ ಇರಬಹುದು. ಆದರೆ, ಧರ್ಮಕ್ಕೆ ಮಿತಿ ಇಲ್ಲ. ದೇಶ ಬಿಟ್ಟು ಧರ್ಮ ಇಲ್ಲ. ಧರ್ಮದ ಅಸ್ತಿತ್ವವ ಉಳಿವಿಗೆ ಯುವಕರು ಮುಂದಾಗಬೇಕೆಂದು ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮಿ ಹೇಳಿದರು.

ಪಟ್ಟಣದ ಧ್ಯಾನ ಮಂದಿರದಲ್ಲಿ ಛತ್ರಪತಿ ಶಿವಾಜಿ ಯುವಸೇನೆಯಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ 394ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದರು.

ಕರ್ನಾಟಕದಲ್ಲಿ ಇಮ್ಮಡಿ ಪುಲಕೇಶಿ, ಕಿತ್ತೂರುರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಸೇರಿ ಅನೇಕ ಮಹನೀಯರು ಮಾತೃಭೂಮಿಗಾಗಿ ಹೋರಾಡಿ ತಮ್ಮ ಹಿರಿಮೆಯನ್ನು ಜಗತ್ತಿಗೆ ಸಾರಿದ್ದಾರೆ. 16ನೇ ಶತಮಾನದಲ್ಲಿ ಶಿವಾಜಿ ಹಿಂದು ಧರ್ಮವನ್ನು ಸಂರಕ್ಷಿಸುವ ಸಲುವಾಗಿಯೇ ಜನಿಸಿದರು ಎನಿಸುತ್ತದೆ.

ಪ್ರತಿ ತಾಯಿ ಜೀಜಾಬಾಯಿಯಂತೆ ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸಬೇಕು ಎಂದರು. ಪಟ್ಟಣದಲ್ಲಿ ಶಿವಾಜಿ ಪುತ್ಥಳಿಯ ಭವ್ಯ ಮೆರವಣಿಗೆ ಜರುಗಿತು. ಕಲ್ಮಠದ ವಿರೂಪಾಕ್ಷಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿ, ಶಂಕ್ರಯ್ಯಸ್ವಾಮಿ ಸುವರ್ಣಗಿರಿಮಠ, ಕಲ್ಲಪ್ಪ ಶಿರಕೋಳ, ಛತ್ರಪತಿ ಶಿವಾಜಿ ಯುವಸೇನೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಇದ್ದರು.