ಮಂಡ್ಯ: ರಾಜ್ಯದಲ್ಲಿಯೇ ಮೊದಲ ಬಾರಿಗೆ ನಗರದಲ್ಲಿ ಆಯೋಜಿಸಿದ್ದ ದಿನದ 24 ಗಂಟೆ ರಕ್ತ ಸಂಗ್ರಹಿಸಿದ ಶಿಬಿರ ನೋಬೆಲ್ ವರ್ಲ್ಡ್ ರೆಕಾರ್ಡ್ಸ್‌ಗೆ ಭಾಜನವಾಗಿದೆ. ಇದರೊಂದಿಗೆ ದಾಖಲೆ ಬರೆದ ಜೀವಧಾರೆ ಟ್ರಸ್ಟ್‌ನ ಪ್ರಯತ್ನಕ್ಕೆ ಪ್ರಶಸ್ತಿಯ ಮುಡಿಗೇರಿದೆ.
ನೊಂದ ಜನಗಳ ಜತೆ ನಮ್ಮ ಹೆಜ್ಜೆ ಎನ್ನುವ ಘೋಷ ವಾಕ್ಯದೊಂದಿಗೆ ಹಲವು ವರ್ಷದಿಂದ ರಕ್ತದಾನ ಶಿಬಿರ ಆಯೋಜಿಸುತ್ತಿರುವ ಜೀವಧಾರೆ ಟ್ರಸ್ಟ್, ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನದ ಅಂಗವಾಗಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಿನದ 24 ಗಂಟೆಯೂ ರಕ್ತ ಸಂಗ್ರಹ ಮಾಡಿದ ವಿಶೇಷ ದಾಖಲೆಗೆ ಪಾತ್ರವಾಗಿತ್ತು.
ಕಾರ್ಗಿಲ್ ವಿಜಯೋತ್ಸವ, ಸುಭಾಷ್ ಚಂದ್ರ ಬೋಸ್, ಭಗತ್‌ಸಿಂಗ್ ನೆನಪಿನಾರ್ಥ ಜೀವಧಾರೆ ಟ್ರಸ್ಟ್ ಶಿಬಿರ ಆಯೋಜಿಸಿಕೊಂಡು ಬರುತ್ತಿದೆ. ಅದೇ ರೀತಿ ಈ ಬಾರಿ ದಾಖಲೆ ಬರೆಯುವ ಗುರಿಯೊಂದಿಗೆ ವಿನೂತನ ಪ್ರಯತ್ನಕ್ಕೆ ಮುಂದಾಯಿತು. ಟ್ರಸ್ಟ್‌ನ ವತಿಯಿಂದ ಇದುವರೆಗೂ 344 ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಸುಮಾರು 43 ಸಾವಿರ ಯೂನಿಟ್ ರಕ್ತ ಸಂಗ್ರಹಿಸಿ ಸೈನಿಕರ ಆಸ್ಪತ್ರೆಯನ್ನೂ ಒಳಗೊಂಡಂತೆ ಸರ್ಕಾರಿ ರಕ್ತನಿಧಿ ಕೇಂದ್ರಗಳಿಗೆ ಹಸ್ತಾಂತರ ಮಾಡಿದ ಹೆಗ್ಗಳಿಗೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ನಡೆಸಿದ ಶಿಬಿರ ದಾಖಳೆ ಬರೆದಿದೆ.
ನೊಂದ ಜನರಿಗೆ ನೆರವಾಗುವ ಉದ್ದೇಶವನ್ನಿಟ್ಟುಕೊಂಡು ಸೇವೆ ಸಲ್ಲಿಸುತ್ತಿರುವ ಜೀವಧಾರೆ ಟ್ರಸ್ಟ್, ಎಂದಿಗೂ ಪ್ರಶಸ್ತಿ ಹಾಗೂ ಹೊಗಳಿಕೆಯ ಹಿಂದೆ ಬಿದ್ದಿಲ್ಲ. ಬದಲಿಗೆ ಪ್ರತಿ ವರ್ಷವೂ ಶಿಬಿರ ಆಯೋಜಿಸಿ ರಕ್ತ ಸಂಗ್ರಹಿಸುವ ಕಾಯಕವನ್ನು ತಪ್ಪದೇ ಮಾಡಿಕೊಂಡು ಬರುತ್ತಿದೆ. ಮಾತ್ರವಲ್ಲದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಹಾಗೂ ಹುತಾತ್ಮರಾದವರಿಗೆ ಪ್ರಶಸ್ತಿ ನೀಡಿ ಗೌರವ ಸಲ್ಲಿಸುವ ಮತ್ತು ಸೇನೆಯಿಂದ ನಿವೃತ್ತಿಯಾಗಿ ತಾಯ್ನಡಿಗೆ ಆಗಮಿಸಿದ ಸೈನಿಕರನ್ನು ರಾಜ ಮರ್ಯಾದೆಯಲ್ಲಿ ಸ್ವಾಗತಿಸಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಗುತ್ತದೆ. ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು ಸೈನಿಕರಿಗೆ ಗೌರವಿಸಲು ಹೊರ ಜಿಲ್ಲೆ ಹಾಗೂ ರಾಜ್ಯಕ್ಕೆ ಹೋಗಿರುವುದು ಇದೆ. ಇದರಿಂದಲೇ ಜೀವಧಾರೆ ಟ್ರಸ್ಟ್‌ಗೆ ಜಿಲ್ಲೆಯಲ್ಲಿ ವಿಶೇಷ ಸ್ಥಾನವಿದೆ.
ಜನವರಿಯಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ನಿರೀಕ್ಷೆಗೂ ಮೀರಿದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಶಿಬಿರ ಸಂಬಂಧ 128 ಹಳ್ಳಿಗೆ ಭೇಟಿ ಪ್ರಚಾರ ಮಾಡಲಾಗಿತ್ತು. ಸಚಿವರು, ಶಾಸಕರು, ಜಿಲ್ಲಾಮಟ್ಟದ ಅಧಿಕಾರಿಗಳು, ಸಂಘಟನೆಗಳಿಂದ ನಿರೀಕ್ಷೆಗೂ ಮೀರಿದ ಬೆಂಬಲ ಸಿಕ್ಕಿತು. ಇದೆಲ್ಲದರ ಪರಿಣಾಮ ಒಂದೇ ಶಿಬಿರದಲ್ಲಿ ಬರೋಬರಿ 1,525 ಯೂನಿಟ್ ರಕ್ತ ಸಂಗ್ರಹ ಮಾಡಿದ ಮೈಲಿಗಲ್ಲನ್ನು ಜೀವಧಾರೆ ಸ್ಥಾಪಿಸಿತ್ತು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗಿಯಾಗಿದರು.
ಇದೊಂದು ಅವಿಸ್ಮರಣೀಯ ಕ್ಷಣ. ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಅಂದಿನ ಶಿಬಿರ ಅಭೂತಪೂರ್ವ ಯಶಸ್ಸು ಕಾಣಲು ಅಧಿಕಾರಿಗಳು, ಸಂಘ ಸಂಸ್ಥೆಗಳು ಸಹಕರಿಸಿದರು. ಟ್ರಸ್ಟ್‌ನ ಸದಸ್ಯರು ಅವಿರತವಾಗಿ ಶ್ರಮಿಸಿದರು. ಆದ್ದರಿಂದ ಈ ಪ್ರಶಸ್ತಿಯನ್ನು ಅವರೆಲ್ಲರಿಗೂ ಅರ್ಪಿಸುತ್ತೇನೆ. ನಟರಾಜು ಜೀವಧಾರೆ ಟ್ರಸ್ಟ್ ಅಧ್ಯಕ್ಷ