ಜಿಲ್ಲೆ

ವಿಜ್ಞಾನಿಯಾಗಲು ಇರಲಿ ದೃಢ ನಿರ್ಧಾರ

ಧನಂಜಯ ಎಸ್.ಹಕಾರಿ.

ನಾಯಕನಹಟ್ಟಿ: ವಿದ್ಯಾರ್ಥಿಗಳು ವಿಜ್ಞಾನಿಯಾಗಲು ದೃಢ ನಿರ್ಧಾರ ಮತ್ತು ಆತ್ಮವಿಶ್ವಾಸ ಅಗತ್ಯ ಎಂದು ನೊಬೆಲ್ ಪುರಸ್ಕೃತ ಭಾರತೀಯ ವಿಜ್ಞಾನಿ ವೆಂಕಿ ರಾಮಕೃಷ್ಣನ್ ಹೇಳಿದರು.

ಸಮೀಪದ ಭಾರತೀಯ ವಿಜ್ಞಾನ ಕೇಂದ್ರ (ಐಐಎಸ್ಸಿ) ಯ ಕೌಶಲಾಭಿವೃದ್ಧಿ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಜಿಲ್ಲೆಯ ನಾನಾ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಪ್ರಪಂಚದಲ್ಲಿ ಹಲವಾರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಪಡೆಯುವ ಅರ್ಹತೆಗಳಿವೆ. ಆದರೆ, ಕೆಲವೇ ಜನರಿಗೆ ಮಾತ್ರ ಸೀಮಿತವಾಗಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿ ಪಡೆಯಲು ಅರ್ಹತೆ, ಪ್ರತಿಭೆ ಮತ್ತು ಅದೃಷ್ಟ ಅಗತ್ಯ. ನಾನು ಆರಂಭದಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡಿದ್ದೆ. ಆದರೆ ನನ್ನ ಆಸಕ್ತಿ ರಸಾಯನಶ್ರಾಸ್ತ್ರ ಮತ್ತು ಜೀವಶಾಸ್ತ್ರದ ಕಡೆಗಿತ್ತು. ಹೀಗಾಗಿ ಜೀವಶಾಸ್ತ್ರವನ್ನು ಆರಂಭದ ಹಂತದಿಂದ ಅಧ್ಯಯನ ಮಾಡಿದ ನಂತರ ರಸಾಯಶಾಸ್ತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡೆ ಎಂದರು.

ವಿದ್ಯಾರ್ಥಿಗಳು ತಮ್ಮ ಪ್ರಯೋಗ ವಿಫಲವಾದಾಗ ಚಿಂತಿಸದೆ ಪುನರ್ ಪ್ರಯೋಗದಲ್ಲಿ ತೊಡಗಬೇಕು. ಆಸಕ್ತಿ ಮತ್ತು ದೃಢವಾದ ಮನಸ್ಥಿತಿ ಅಧ್ಯಯನಕ್ಕೆ ಅವಶ್ಯಕ ಎಂದು ತಿಳಿಸಿದರು.

ಇದೀಗ ಅಪಾರ ಪ್ರಮಾಣದ ಮಾಹಿತಿ ಸಂಗ್ರಹ ಸಾಧ್ಯವಿದೆ. ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ಹೊಸ ಅನ್ವೇಷಣೆ ಅಥವಾ ಸಿದ್ಧಾಂತವನ್ನು ಹೊರಜಗತ್ತು ಪರೀಕ್ಷಿಸಬೇಕು ಎಂದರು.

ಹಿಂದಿನ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗ ರುಜಿನಗಳಿದ್ದವು. ಆದರೆ ಇವುಗಳನ್ನು ಇದೀಗ ಸಮರ್ಥವಾಗಿ ಎದುರಿಸಲಾಗಿದೆ. ಹಿಂದೆ ಮಾನವರ ಆಯುಷ್ಯ ಕಡಿಮೆಯಿತ್ತು. ಇದೀಗ ಜೀವಿತಾವಧಿ ಹೆಚ್ಚಾಗಿದೆ ಎಂದರು.

ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸ್ ಸಂಸ್ಥೆ ನಿರ್ದೇಶಕ ಎಲ್.ಎಸ್. ಶಶಿಧರ್ ಮಾತನಾಡಿ, ಪ್ರಯೋಗಗಳು ಕೆಲವೊಮ್ಮೆ ವಿಫಲವಾಗುತ್ತವೆ. ಇದನ್ನು ಸೋಲು ಎಂದು ಭಾವಿಸಬಾರದು. ಆದ ತಪ್ಪುಗಳನ್ನು ಸರಿಪಡಿಸಿಕೊಂಡಾಗ ಮಾತ್ರ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದರು.

ಐಐಎಸ್ಸಿ ಕೌಶಲಭಿವೃದ್ಧಿ ಕೇಂದ್ರದ ಮುಖ್ಯಸ್ಥ ಬಿ. ಸುಬ್ಬಾರೆಡ್ಡಿ ಮಾತನಾಡಿ, ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳು ನಮ್ಮ ಕ್ಯಾಂಪಸ್​ಗೆ ಭೇಟಿ ನೀಡಿರುವುದು ವಿಶೇಷ ಎಂದು ಹೇಳಿದರು.

ಪ್ರೊ.ಡಿ.ಎನ್.ರಾವ್, ಡಾ.ಆರ್.ರಾಘವೇಂದ್ರ, ಡಾ. ಜೋಗಿಂದರ್ ಸಿಂಗ್, ಡಾ. ಅರವಿಂದ್, ಡಾ. ಕಿಶೋರ್, ಇಂಜಿನಿಯರ್ ಹೇಮಂತ್, ಸಿಬ್ಬಂದಿಗಳಾದ ವೀರೇಶ್, ವಿಜಯ್ ಇತರರಿದ್ದರು.