ನಾಯಕನಹಟ್ಟಿ: ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ರಾಜಕೀಯವಾಗಿ ನನ್ನ ತೇಜೋವಧೆ ಮಾಡಲು ಕಾಣದ ರಾಜಕೀಯ ಶಕ್ತಿಗಳು ಪ್ರಯತ್ನಿಸುತ್ತಿವೆ. ಈಗಾಗಲೇ ತನಿಖೆ ಆರಂಭವಾಗಿದ್ದು, ಸತ್ಯ ಶೀಘ್ರ ಗೊತ್ತಾಲಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಹೇಳಿದರು.
ಪಟ್ಟಣದ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಅಧಿಕಾರಕ್ಕೆ ಬಂದ ಎಲ್ಲ ಸಂದರ್ಭ ಇಲ್ಲಸಲ್ಲದ ಆರೋಪಗಳು ಸೃಷ್ಠಿಯಾಗುತ್ತವೆ. ಪ್ರಸ್ತುತ ನನ್ನ ವಿರುದ್ಧ ದಾಖಲಿಸಿರುವುದು ಸುಳ್ಳು ಪ್ರಕರಣ. ಘಟನೆ ನಡೆದಾಗ ನಾನು ಯಲಹಂಕ, ಬೆಂಗಳೂರಿನಲ್ಲಾಗಲಿ ಇರಲಿಲ್ಲ. ಚಿತ್ರದುರ್ಗ ಜಿಲ್ಲೆಯ ಪ್ರವಾಸದಲ್ಲಿದ್ದೆ. ಹಳೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಈಗ ಹರಿಬಿಟ್ಟು ರಾಜಕೀಯವಾಗಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಬೇಸರಿಸಿದರು.
ಕಾಣದ ವ್ಯಕ್ತಿಗಳು ದಲಿತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಸುತ್ತಿವೆ. ಮೂಲತಃ ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ-ವರ್ಗದ ಜನರೇ ಹೆಚ್ಚು ಇದ್ದಾರೆ. ಈ ಜಿಲ್ಲೆಯಲ್ಲಿ ಹುಟ್ಟಿ, ಇಲ್ಲಿಯೇ 60 ವರ್ಷದಿಂದ ಜೀವನ ಮಾಡುತ್ತಿದ್ದೇನೆ. ಇಷ್ಟು ವರ್ಷದಲ್ಲಿ ಸುಧಾಕರ್ ಎಂದರೇನು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.