ಸ.ದಾ. ಜೋಶಿ ಬೀದರ್
ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕಾ ಘಟಕ ಸ್ಥಾಪನೆಗೆ ಉತ್ತೇಜನ ಸಿಗುತ್ತಿಲ್ಲ. ಹೀಗಾಗಿ ದುಡಿಯುವ ಕೈಗಳಿಗೆ ಸ್ಥಳೀಯವಾಗಿ ಕೆಲಸ ಸಿಗುವುದು ಕನ್ನಡಿಯೊಳಗಿನ ಗಂಟು ಎಂಬಂತಾಗಿದೆ. ಕೈಗಾರಿಕೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಇಲ್ಲಿ ಸಾಕಷ್ಟು ಅವಕಾಶಗಳಿವೆ. ಇದಕ್ಕೆ ಪೂರಕ ವಾತಾವರಣವಿದೆ. ಈಗಂತೂ ನಾಗರಿಕ ವಿಮಾನಯಾನ ಸೌಕರ್ಯ ಸಹ ಲಭ್ಯವಾಗಿದೆ. ಆದರೆ ಈ ನಿಟ್ಟಿನಲ್ಲಿ ಪರ್ಫೆಕ್ಟ್ ಯೋಜನೆ ರೂಪಿಸದಿರುವುದು ಹಾಗೂ ಸರ್ಕಾರ, ಜನಪ್ರತಿನಿಧಿಗಳಿಂದ ಸಮರ್ಪಕ ಪ್ರಯತ್ನ ನಡೆಯದಿರುವ ಕಾರಣ ಇಲ್ಲಿನ ಕೈಗಾರಿಕೆ ಬೆಳವಣಿಗೆಗೆ ಶಾಶ್ವತ ಬ್ರೇಕ್ ಬಿದ್ದಿದೆ.
ತೆಲಂಗಾಣದ ರಾಜಧಾನಿ ಹೈದರಾಬಾದ್ ನಿಂದ ಬೀದರ್ ಕೇವಲ 135 ಕಿಲೋಮೀಟರ್ ದೂರದಲ್ಲಿದೆ. ಜಿಲ್ಲೆಗೆ ವಿಮಾನ ಸೌಲಭ್ಯವಿದೆ. ವಿವಿಧೆಡೆಯಿಂದ ರೈಲ್ವೆ ಸಂಪರ್ಕವಿದೆ. ಚತುಷ್ಪಥ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯ ಕನೆಕ್ಟಿವಿಟಿ ಇದೆ. ಬಂಡವಾಳದಾರರಿಗೆ ಸೆಳೆಯುವ ನಿಟ್ಟಿನಲ್ಲಿ ಇಷ್ಟೊಂದು ಸುಲಭ ಸಂಪರ್ಕ ಸೌಲಭ್ಯಗಳ ಲಭ್ಯತೆ ಇಲ್ಲಿದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಸರ್ಕಾರಗಳ ಹುಸಿ ಭರವಸೆಯಿಂದ ಇಲ್ಲಿ ಒಂದೂ ದೊಡ್ಡ ಕೈಗಾರಿಕೆ ತಲೆ ಎತ್ತುತ್ತಿಲ್ಲ. ಹೀಗಾಗಿ ಜಿಲ್ಲೆಯ ಸಹಸ್ರಾರು ಕೈಗಳಿಗೆ ಸ್ಥಳೀಯವಾಗಿ ಕೆಲಸ ಸಿಗದ ಕಾರಣ ಅತ್ತಿತ್ತ ಅಲೆದಾಡುವಂತಾಗಿದೆ. ಕಾರ್ಮಿಕರ ಗುಳೆ ಸಾಮಾನ್ಯವಾಗಿದೆ.
ಜಿಲ್ಲೆಯಲ್ಲಿ 2000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿ, ಕೃಷಿ ಉಪಕರಣ ಉತ್ಪಾದನಾ ಘಟಕ ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರ 2018ರ ಬಜೆಟ್ನಲ್ಲಿ (ಕುಮಾರಸ್ವಾಮಿ ಅವರು ಸಿಎಂ ಇದ್ದಾಗ) ಘೋಷಿಸಿತ್ತು. ಇದು ಇಲ್ಲಿನ ಒಂದಿಷ್ಟು ಜನರಿಗೆ ಕೆಲಸ ಕಲ್ಪಿಸಿತೆಂಬ ಖುಷಿ ಕೊಟ್ಟಿತು. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಅವರು ಈ ಘಟಕದ ಕೆಲಸವೇ ಆರಂಭವಾಗಲಿದೆ ಎಂಬ ಉಮೇದಿನ ವಾಗ್ದಾನ ಮಾಡಿದರು. ಆದರೆ ಈ ಹಿಂದೆ ಮಾಡಿದಂಥ ಘೋಷಣೆಗಳ ಸಾಲಿಗೆ ಇದು ಸಹ ಸೇರಿತು. 2006-08ರಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವಿದ್ದಾಗಲೂ ಖಾಶೆಂಪುರ ಜಿಲ್ಲಾ ಉಸ್ತುವಾರಿ ಸಚಿವರಿದ್ದರು. ಜಿಲ್ಲೆಯಲ್ಲಿ ದೊಡ್ಡ ಜವಳಿ ಉದ್ಯಮ ಸ್ಥಾಪಿಸುವುದಾಗಿ ಮಾಡಿದ್ದ ಘೋಷಣೆ ಹುಸಿಯಾಗಿತ್ತು. ಎಸ್ಎಂ ಕೃಷ್ಣ ಸರ್ಕಾರದ ಅವಧಿಯಲ್ಲಿ ಬೃಹತ್ ಜವಳಿ ಪಾಕ್೯ ಸ್ಥಾಪನೆ ಘೋಷಣೆ ಸಹ ಹತ್ತರಲ್ಲಿ ಹನ್ನೊಂದಾಯಿತು. ಹೀಗಾಗಿ ಸರ್ಕಾರದ ಭರವಸೆಗಳಿಗೆ ನಂಬದಂಥ ಸ್ಥಿತಿ ಸೃಷ್ಟಿಯಾಗಿದೆ.
ಕೈಗಾರಿಕೋದ್ಯಮ ಸ್ಥಾಪಿಸುವುದು ಹೇಳಿಕೆ ನೀಡುವಷ್ಟು ಸುಲಭದ ಕೆಲಸವಲ್ಲ. ಕೈಗಾರಿಕೆಗೆ ಉತ್ತೇಜಿಸುವಂಥ ಅಗತ್ಯ ಮೂಲಸೌಲಭ್ಯ ಕಲ್ಪಿಸುವುದು ಅತಿ ಮುಖ್ಯವಾಗಿದೆ. ಸಂಪರ್ಕ ವ್ಯವಸ್ಥೆ ಚೆನ್ನಾಗಿದೆ ಎಂಬುದು ಸಮಾಧಾನದ ವಿಷಯ. ಆದರೆ ಹತ್ತಾರು ವರ್ಷ ಕಳೆದರೂ ಕೊಳಾರ್ ಕೈಗಾರಿಕಾ ಪ್ರದೇಶದಲ್ಲಿ ಸಾಮಾನ್ಯ ಶುದ್ಧೀಕರಣ ಘಟಕ (ಕಾಮನ್ ಎಫಿಲುಯೆಂಟ್ ಟ್ರೀಟ್ಮೆಂಟ್ ಪ್ಲಾಂಟ್) ಸ್ಥಾಪನೆ ಸಾಧ್ಯವಾಗಿಲ್ಲ. ಸಮರ್ಪಕ ನೀರಿಲ್ಲ. ವಿದ್ಯುತ್ ಪೂರೈಕೆ ಅಷ್ಟಕ್ಕಷ್ಟೇ. ಸೌಲಭ್ಯಗಳ ಕೊರತೆ ಇರುವಾಗ ಎಲ್ಲವನ್ನೂ ಲಾಭ-ಹಾನಿ ದೃಷ್ಟಿಯಿಂದ ನೋಡುವ ಉದ್ಯಮಿದಾರರು ಸುಮ್ಮನೆ ಕೋಟಿಗಟ್ಟಲೇ ರೂ. ಹೂಡಿಕೆ ಮಾಡುತ್ತಾರಾ? ಎಂಬುದೇ ದೊಡ್ಡ ಪ್ರಶ್ನೆ. ಆದರೆ ಇಂಥ ಪ್ರಶ್ನೆ ಬಗ್ಗೆ ಗಂಭೀರ ಚಿಂತಿಸಿ, ಪರಿಹಾರ ಹುಡುಕುವ ಕೆಲಸ ಮಾತ್ರ ಇಲ್ಲಿನ ಜನಪ್ರತಿನಿಧಿಗಳಿಂದ ನಡೆಯದಿರುವುದು ದುರದೃಷ್ಟಕರ ಸಂಗತಿ.
ಏನಾಯ್ತು ಕ್ಲಸ್ಟರ್ ಇಂಡಸ್ಟ್ರೀಯಲ್?
ಹಿಂದಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರವು ಬೀದರ್ ಸೇರಿದಂತೆ ಉತ್ತರ ಕರ್ನಾಟಕ ಭಾಗದ 9 ಜಿಲ್ಲೆಗಳನ್ನು ಕ್ಲಸ್ಟರ್ ಇಂಡಸ್ಟ್ರೀಯಲ್ ಅಡಿಯಲ್ಲಿ ಆಯ್ಕೆ ಮಾಡಿದೆ. ಈ ಜಿಲ್ಲೆಗಳಲ್ಲಿ ಆದಷ್ಟು ಬೇಗ ಉದ್ಯಮ ಸ್ಥಾಪಿಸಿ, ದುಡಿಯವ ಕೈಗಳಿಗೆ ಕೆಲಸ ಕೊಡಿಸಲು ಪ್ರಯತ್ನಿಸಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದರು. 9 ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪಿಸಲು ಆಗ ಉದ್ಯಮಿಗಳೊಂದಿಗೆ ಚರ್ಚೆಯೂ ನಡೆದಿತ್ತು. ಬಜೆಟ್ನಲ್ಲಿ ಘೋಷಿಸಿದಂತೆ ಜಿಲ್ಲೆಯಲ್ಲಿ ಕೃಷಿ ಉಪಕರಣಗಳ ತಯಾರಿಕೆ ಘಟಕ ತಲೆ ಎತ್ತಲಿದೆ ಎಂದು ಸ್ಪಷ್ಟಪಡಿಸಿದ್ದರು. ಆದರೆ ಆ ಸರ್ಕಾರದ ಅವಧಿಯಲ್ಲಿ ಯಾವುದೇ ಬೆಳವಣಿಗೆಗಳು ಆಗಿಲ್ಲ. ಕುಮಾರಸ್ವಾಮಿ ಸರ್ಕಾರದ ಪತನದ ಬಳಿಕ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬಂದು 15 ತಿಂಗಳಾಗಿದೆ. ಆದರೆ ಈವರೆಗೆ ಕೈಗಾರಿಕೆ ಸ್ಥಾಪನೆ ಕುರಿತ ಚಿಂತನೆ ನಡೆದಿಲ್ಲ, ಕ್ಲಸ್ಟರ್ ಇಂಡಸ್ಟ್ರೀಯಲ್ ಯೋಜನೆಯತ್ತ ಯಾರೂ ಕಣ್ಣೆತ್ತಿಯೂ ನೋಡಿಲ್ಲ. ಇನ್ನು ಕರ್ನಾಟಕ-ತಮಿಳುನಾಡು ಗಡಿಗೆ ಹೊಂದಿಕೊಂಡ ಹೊಸುರ್ ಮಾದರಿಯಲ್ಲಿ ಬೀದರ್ ನಲ್ಲಿ ಕೈಗಾರಿಕೋದ್ಯಮ ಅಭಿವೃದ್ಧಿಪಡಿಸಲು ಏನೇನು ಮಾಡಬಹುದು ಎಂಬ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸುವಂತೆ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಈವರೆಗೂ ವರದಿ ಸಹ ಸಿದ್ಧವಾಗಿಲ್ಲ. ಜನಪ್ರತಿನಿಧಿಗಳಲ್ಲಿ ಗಂಭೀರತೆ ಇರದ ಕಾರಣ ಈ ವಿಷಯದಲ್ಲಿ ಅಧಿಕಾರಿಗಳು ಸಹ ನಿರುಮ್ಮಳವಾಗಿದ್ದಾರೆ ಎನ್ನಬಹುದು.
ಕಾರ್ಮಿಕರ ವಲಸೆಗಿಲ್ಲ ಬ್ರೇಕ್
ಜಿಲ್ಲೆಯಲ್ಲಿ ಸ್ಥಳೀಯವಾಗಿ ಉದ್ಯೋಗವಕಾಶ ಇಲ್ಲಕ್ಕೆ ಸಮನಾದ ಕಾರಣ ಇಲ್ಲಿಂದ ಕೆಲಸ ಅರಸಿ ವಲಸೆ ಹೋಗುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ವಲಸೆ ಎಂಬುದು ಗಂಭೀರ ವಿಷಯವೇ ಸರಿ. ಆದರೆ ಇಂದಿಗೂ ಇದು ನಮ್ಮನ್ನಾಳುವವರ ಪಾಲಿಗೆ ನಗಣ್ಯ ಎನಿಸಿದೆ. ಹೈದರಾಬಾದ್, ಪುಣೆ, ಮುಂಬಯಿ, ಲಾತೂರ್ , ಸೊಲ್ಲಾಪುರ ಸೇರಿ ಅನೇಕ ಕಡೆ ಜಿಲ್ಲೆಯ ವಲಸಿಗರ ದೊಡ್ಡ ಸಂಖ್ಯೆಯೇ ಇದೆ. ಬರ ಹಾಗೂ ಬೇಸಿಗೆ ಅವಧಿಯಲ್ಲಿ ವಲಸೆ ಸಾಮಾನ್ಯವಾಗಿದೆ. ಚುನಾವಣೆ ಬಂದಾಗ ವಲಸಿಗರಿಗೆ ಸೆಳೆಯಲು ಪುಣೆ, ಹೈದರಾಬಾದ್ ಇತರೆಡೆ ಪ್ರಚಾರ ಸಭೆ ನಡೆಸುವ ನಮ್ಮ ರಾಜಕಾರಣಿಗಳು, ಅವರಿಗೆ ಇಲ್ಲೇ ಉದ್ಯೋಗ ಒದಗಿಸಿ ಸ್ಥಳೀಯವಾಗಿ ಶಾಶ್ವತ ಬದುಕು ಕಟ್ಟಿಕೊಡುವ ಬಗ್ಗೆ ಚಿಂತನೆ ನಡೆಸದಿರುವುದು ದುರಂತ. ಮತ ಬೇಕು. ಆದರೆ ಬಡವರ ಹಿತ ಬೇಡ ಎಂಬ ಧೋರಣೆ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರ ನನಗೆ ಹೊಸ ಜವಾಬ್ದಾರಿ ನೀಡಿದೆ. ಬೀದರ್ ಜಿಲ್ಲೆಗೆ ಹೂಡಿಕೆದಾರರನ್ನು ಆಕರ್ಷಿಸಿ ಹೊಸ ಕೈಗಾರಿಕೆ ಸ್ಥಾಪಿಸುವುದಕ್ಕೆ ಮೊದಲ ಆದ್ಯತೆ ನೀಡುವೆ. ನಿಗಮದ ಮೊದಲ ಸಭೆಯಲ್ಲೇ ಈ ವಿಷಯ ಪ್ರಸ್ತಾಪಿಸುವೆ. ಕೈಗಾರಿಕೆ ಸ್ಥಾಪನೆಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಪ್ರಯತ್ನಿಸುವೆ.| ಡಾ. ಶೈಲೇಂದ್ರ ಬೆಲ್ದಾಳೆಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ
ಬೀದರ್ ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಈಗ ನಾಗರಿಕ ವಿಮಾನಯಾನ ಸೇವೆ ಆರಂಭವಾಗಿರುವುದು ಇದಕ್ಕೆ ಮತ್ತಷ್ಟು ಪ್ಲಸ್ ಎನಿಸಿದೆ. ಪರಿಣಾಮಕಾರಿ ಪ್ರಯತ್ನ, ಪರ್ಫೆಕ್ಟ್ ಯೋಜನೆ ರೂಪಿಸಿದರೆ ಬೀದರ್ ಜಿಲ್ಲೆಗೆ ಇಂಡಸ್ಟ್ರೀಯಲ್ ಹಬ್ ಆಗಿ ಬದಲಿಸಿ ಅನೇಕ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಜಿಲ್ಲೆಗೆ ಆರ್ಥಿಕ ಪ್ರಗತಿಯತ್ತ ಒಯ್ಯಬಹುದು. | ಸಂತೋಷಕುಮಾರ ತಾಳಂಪಳ್ಳಿಯುವ ಉದ್ಯಮಿ ಬೀದರ್
ಬೀದರ್ ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಬೆಳವಣಿಗೆಗೆ ಇತ್ತೀಚಿನ ವರ್ಷಗಳಲ್ಲಿ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆ ಇದಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿ ಒಂದಾದರೂ ಬೃಹತ್ ಉದ್ಯಮ ಸ್ಥಾಪನೆಗೆ ಗಂಭೀರ ಪ್ರಯತ್ನಗಳು ನಡೆಯದಿರುವುದು ಬೇಸರದ ಸಂಗತಿ. ಉದ್ಯಮಿಗಳಿಗೆ ಸೆಳೆಯುವ ಕೆಲಸ ಆದ್ಯತೆ ಮೇಲೆ ನಡೆಯಬೇಕು. ಭರವಸೆಗಳಿಂದ ಕಾರ್ಖಾನೆ ಕಟ್ಟಲು ಸಾಧ್ಯವಿಲ್ಲ.| ಬಿ.ಜಿ.ಶೆಟಕಾರ್ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬೀದರ್