ಜಿಲ್ಲೆ

ನೀರಿಲ್ಲ, ನೆರಳಿಲ್ಲ…ಗಜೇಂದ್ರಗಡದಲ್ಲಿ ಸಾಗಿದೆ ವ್ಯಾಪಾರ

ಶಿವಕುಮಾರ ಶಶಿಮಠ ಗಜೇಂದ್ರಗಡ
ಸಂಚಾರ ದಟ್ಟಣೆ, ಕಸದ ರಾಶಿ, ನೈರ್ಮಲ್ಯ ರಕ್ಷಣೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೀದಿಬದಿಯ ವ್ಯಾಪಾರಿಗಳನ್ನು ಪಟ್ಟಣದ ಹೊರವಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ, ಆ ಜಾಗದಲ್ಲಿ ನೀರಿಲ್ಲ, ನೆರಳಿಲ್ಲ. ಶೌಚಗೃಹದ ವ್ಯವಸ್ಥೆಯೂ ಇಲ್ಲ. ಬಿಸಿಲು, ಮಳೆಗೆ ಮೈಯೊಡ್ಡಿ ವ್ಯಾಪಾರಿಗಳ ಬದುಕು ಅಸಹನೀಯವಾಗತೊಡಗಿದೆ.
ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗದಲ್ಲಿ ನೂರಾರು ಬೀದಿಬದಿಯ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ. ವ್ಯಾಪಾರಸ್ಥರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಆಡಳಿತದ ಉಸ್ತುವಾರಿಗಳು ಇಚ್ಛಾಶಕ್ತಿ ತೋರಿಲ್ಲ. ಪರಿಣಾಮ ನೀರು, ನೆರಳಿಗಾಗಿ ಪರದಾಡುವ ದುಃಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ ಸೇರಿ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸುಗಮ ಸಂಚಾರಕ್ಕಾಗಿ ಬೀದಿಬದಿಯ ವ್ಯಾಪಾರಕ್ಕೆ ಅಧಿಕಾರಿಗಳು ನಿಬರ್ಂಧ ಹೇರಿದ್ದಾರೆ. ತರಕಾರಿ, ಹೂವು-ಹಣ್ಣು ಸೇರಿ ಬೀದಿಬದಿಯ ವ್ಯಾಪಾರಿಗಳು ರೋಣ ರಸ್ತೆಯ ಬಯಲಿಗೆ ಸ್ಥಳಾಂತರ ಆಗಿದ್ದಾರೆ. ಮಳೆ, ಜೋರಾದ ಗಾಳಿ ಬೀಸಿದರೆ ತರಕಾರಿ, ಹೂವು, ಹಣ್ಣು ಹಾಳಾಗಿ ಮಾರಾಟಗಾರರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಬೀಳುವಂತಾಗಿದೆ.
ಜಿಲ್ಲೆಯಲ್ಲೇ ಪ್ರಮುಖ ವಾಣಿಜ್ಯ ಪಟ್ಟಣವಾದ ಗಜೇಂದ್ರಗಡದಲ್ಲಿ ಸುಸಜ್ಜಿತ ಮಾರುಕಟ್ಟೆ ಗಗನಕುಸುಮವಾಗಿದೆ. ರೋಣ, ಕುಷ್ಟಗಿ, ಜೋಡು ರಸ್ತೆ ಹಾಗೂ ಕೆಕೆ ವೃತ್ತದಲ್ಲಿ ರಸ್ತೆ ಅತಿಕ್ರಮಣದಿಂದ ಸುಗಮ ಸಂಚಾರ ಕಷ್ಟಸಾಧ್ಯ ಎಂಬಂತಾಗಿತ್ತು. ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದರು. ಮೇಲಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್, ಪುರಸಭೆ ಅಧಿಕಾರಿಗಳು ಪಟ್ಟಣದ ಜೋಡು ರಸ್ತೆ, ಕೆಕೆ ವೃತ್ತದಿಂದ ಬೀದಿ ಬದಿ ವ್ಯಾಪಾರ ತೆರವು ಮಾಡಿ, ಅಲ್ಲಿ ವ್ಯಾಪಾರ ನಡೆಸದಂತೆ ನಿರ್ಬಂಧ ಹೇರಿದ್ದಾರೆ.
ಸಾಲ ತೀರಿಸಲು ಹರಸಾಹಸ;
ಪಟ್ಟಣ ಸೇರಿ ಸುತ್ತಲಿನ ಹಾಗೂ ನೆರೆಯ ನೆರೆಯ ತಾಲೂಕಿನ 25ಕ್ಕೂ ಅಧಿಕ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರು ಪಟ್ಟಣದಲ್ಲಿ ತರಕಾರಿ, ಹೂವು ಸೇರಿ ಅಗತ್ಯ ಸಾಮಾಗ್ರಿಗಳ ವ್ಯಾಪಾರಕ್ಕಾಗಿ ಪಟ್ಟಣವನ್ನು ನೆಚ್ಚಿಕೊಂಡಿದ್ದಾರೆ. ಬೀದಿಬದಿಯ ವ್ಯಾಪಾರವನ್ನು ನೆಚ್ಚಿಕೊಂಡು ಬ್ಯಾಂಕ್ ಹಾಗೂ ಸ್ವ ಸಹಾಯ ಸಂಘಗಳಲ್ಲಿ ಸಾಲಗಳಲ್ಲಿ ತೆಗೆದುಕೊಂಡು ಅನೇಕರು ವ್ಯಾಪಾರದಲ್ಲಿ ತೊಡಗಿದ್ದಾರೆ. ಈಗ ಸಾಲ ತೀರಿಸಲು ಮತ್ತೆ ಸಾಲ ಮಾಡುವ ಸ್ಥಿತಿ ರೈತರು ಹಾಗ ವ್ಯಾಪಾರಿಗಳದು.

ಮೂತ್ರ, ಶೌಚಕ್ಕೆ ಪರದಾಟಪಟ್ಟಣದ ಜನರು ಹೂ-ಹಣ್ಣು ಮಾರಾಟ-ಖರೀದಿ ನಡೆಯುವ ಸ್ಥಳದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಾಗಿದೆ. ಬೀದಿ ಬದಿ ವ್ಯಾಪಾರಿಗಳ ನೈಸರ್ಗಿಕ ಕ್ರಿಯೆಗಳಿಗೆ ಸೂಕ್ತ ಜಾಗ ಇಲ್ಲದಿರುವುದು ಸ್ವಚ್ಛ ಭಾರತ ಯೋಜನೆಯನ್ನು ಅಣಕಿಸುವಂತಿದೆ. ಪ್ರತಿದಿನ ಉಳಿಯುವ ತರಕಾರಿ ಹಾಗೂ ಬಾಡಿದ ಹೂ, ಕೊಳೆತ ಹಣ್ಣಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಈ ಗಲೀಜು ಹಾಗೂ ಕೊಳಚೆಯಿಂದ ಮಲೇರಿಯಾ ಭೀತಿಯೂ ಆವರಿಸಿದೆ. ಮಾರುತಿ ಗೊಂಧಳೆ, ಸ್ಟೇಷನರಿ ವ್ಯಾಪಾರಿ
ಪುರಸಭೆ ಅಧ್ಯಕ್ಷನಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದು ಸೆ.30ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಚರ್ಚಿಸಿ ವ್ಯಾಪಾರಿಗಳ ಹಿತ ಕಾಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಸುಭಾಸ ಮ್ಯಾಗೇರಿ, ಪುರಸಭೆ ಅಧ್ಯಕ್ಷ