ಜಿಲ್ಲೆ

ಕುಡಿಯಲು-ಸ್ನಾನಕ್ಕಿಲ್ಲ ನೀರು

ಬಸವರಾಜ ವೀರಪ್ಪ ಗರಗ

ಮುಂಡಗೋಡ: ಕುಡಿಯಲು ಹಾಗೂ ಸ್ನಾನಕ್ಕೆ ನೀರಿಲ್ಲದೆ ತಾಲೂಕಿನ ಕರಗಿನಕೊಪ್ಪ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಶಾಲೆಯಲ್ಲಿ 250ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಶಾಲೆಯ ಆವರಣದಲ್ಲಿ ಎರಡು ಕೊಳವೆ ಬಾವಿಗಳಿದ್ದು, ಒಂದರ ಮೋಟಾರ್ ಹಾಳಾಗಿದೆ. ಮತ್ತೊಂದರಲ್ಲಿ ಬರುವ ಅಲ್ಪ ಪ್ರಮಾಣದ ನೀರು ವಿದ್ಯಾರ್ಥಿಗಳಿಗೆ ಸಾಲುತ್ತಿಲ್ಲ. ಕೊಳವೆಬಾವಿಗೆ ಚಿಕ್ಕ ಪೈಪ್ ಅಳವಡಿಸಿ ಐವತ್ತು ಮೀಟರ ದೂರದಲ್ಲಿ ಹಾಕಲಾಗಿದೆ. ಬೆಳಗ್ಗೆ ಎಲ್ಲ ವಿದ್ಯಾರ್ಥಿಗಳು ಪೈಪ್ ಬಳಿ ಬಂದು ಮುಖ ತೊಳೆಯಬೇಕು. ಶೌಚ ಹಾಗೂ ಸ್ನಾನಕ್ಕೆ ಪೈಪ್​ನಿಂದ ನೀರು ತುಂಬಿಕೊಂಡು ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಕೆಟ್ಟಿರುವ ಕೊಳವೆ ಬಾವಿಯ ಮೋಟಾರ್ ದುರಸ್ತಿಪಡಿಸಲು ಶಾಲೆಯ ಮುಖ್ಯೋಪಾಧ್ಯಾಯ ಮುಂದಾಗುತ್ತಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೋಟಾರ್ ದುರಸ್ತಿಯಾದರೆ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳ ಪಾಲಕರು.
ವಸತಿ ನಿಲಯದಲ್ಲಿನ ಕೆಲ ಶೌಚಗೃಹಗಳು ಬಳಕೆಗೆ ಬಾರದಷ್ಟು ಹಾಳಾಗಿವೆ. ನೀರಿನ ಅಭಾವದಿಂದಾಗಿ ಶೌಚಗೃಹಗಳು ಗಬ್ಬೆದ್ದು ನಾರುತ್ತಿವೆ. ಅಲ್ಲದೆ, ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ಕ್ರಿಮಿಕೀಟಗಳ ಭಯದಿಂದ ವಿದ್ಯಾರ್ಥಿಗಳು ಶೌಚಗೃಹಕ್ಕೆ ಹೋಗಲು ಹೆದರುತ್ತಿದ್ದಾರೆ.
ಖಾಸಗಿ ವ್ಯಕ್ತಿ ವಾಸ: ಶಾಲೆಯ ಅಡುಗೆ ಮನೆ ಎದುರು ಸಿಬ್ಬಂದಿ ವಸತಿ ಗೃಹಗಳಿವೆ. ಸಿಬ್ಬಂದಿ ವಾಸವಿರಬೇಕಿದ್ದ ಕಟ್ಟಡದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅನಧಿಕೃತವಾಗಿ ಕೆಲ ತಿಂಗಳಿಂದ ವಾಸವಾಗಿದ್ದಾರೆ. 6ರಿಂದ 12ನೇ ತರಗತಿ ವರೆಗಿನ ಬಾಲಕಿಯರು ಸಹ ಈ ವಸತಿ ಶಾಲೆಯಲ್ಲಿದ್ದಾರೆ. ಶಾಲೆ ಸಿಬ್ಬಂದಿ ಬಿಟ್ಟು ಖಾಸಗಿ ವ್ಯಕ್ತಿಗೆ ಕೊಠಡಿ ನೀಡಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ.

ಕರಗಿನಕೊಪ್ಪ ಮುರಾರ್ಜಿ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು. ಖಾಸಗಿ ವ್ಯಕ್ತಿ ವಾಸವಾಗಿರುವ ಬಗ್ಗೆ ಮಾಹಿತಿಯಿಲ್ಲ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.| ಅಜ್ಜಪ್ಪ ಸೊಗಲದ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಮೂರ್ನಾಲ್ಕು ದಿನಗಳಿಂದ ವಸತಿ ನಿಲಯದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯನ್ನು ಸರಿಪಡಿಸಲಾಗುವುದು. ಕಾಲೇಜು ಕಟ್ಟಡ ನಿರ್ಮಾಣ ಕಾರ್ವಿುಕರ ಮೇಲ್ವಿಚಾರಕ ನಮ್ಮ ಸಿಬ್ಬಂದಿಯ ಕೊಠಡಿಯಲ್ಲಿ ವಾಸವಾಗಿದ್ದು, ಖಾಲಿ ಮಾಡಿಸುತ್ತೇವೆ.| ಮಂಜುನಾಥ ಮರಿತಮ್ಮನ್ಣವರ, ಮುಖ್ಯೋಪಾಧ್ಯಾಯ