ವಿಜಯವಾಣಿ: ಭಾರತ ದೇಶದ ಸಂಸ್ಕೃತಿಗೆ ಕುರುಬರ ಕೊಡುಗೆ ಅಪಾರ ಎಂದು ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳದ ಉಪಾಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಮಾತನಾಡಿದ ಅವರು, ಕುರುಬರು ವಿಶ್ವದ ಮೂಲ ಪುರುಷರು. ದೈವಾಂಶ ಸಂಭೂತರು ಎಂದೆಲ್ಲ ಕರೆಯಿಸಿಕೊಳ್ಳುತ್ತಿರುವ ಮುಗ್ದರು. ಇಂಥ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕುರಿಗಾಹಿಗಳ ಮೇಲೆ ಹಲ್ಲೆ ಖಂಡನೀಯ. ಮಳೆ, ಗಾಳಿ, ಬಿಸಿಲೆನ್ನದೆ ಊರೂರು ಸುತ್ತುವ, ಪ್ರಕೃತಿಯ ಆರಾಧಕರಾಗಿರುವ ಕುರಿಗಾಹಿಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಅರಣ್ಯ ಇಲಾಖೆಯವರ ಮಾನಸಿಕ, ದೈಹಿಕ ಹಿಂಸೆಯೊಂದಿಗೆ ಕಳ್ಳಕಾಕರಿಂದ ಕುರಿಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
2019ರ ಜಾನುವಾರು ಗಣತಿಯ ಪ್ರಕಾರ ಕರ್ನಾಟಕದಲ್ಲಿ 17.2 ಮಿಲಿಯನ್ ಕುರಿ ಮತ್ತು ಮೇಕೆಗಳಿವೆ. ಶೇ.75ಗಿಂತ ಹೆಚ್ಚಿನ ರೈತರು ಹಾಗೂ 15 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಮ್ಮ ಜೀವನೋಪಾಯಕ್ಕಾಗಿ ಕುರಿ ಮತ್ತು ಮೇಕೆಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದರು.
ಮಹಾತ್ಮ ಗಾಂಧೀಜಿಯವರ ಅಚ್ಚುಮೆಚ್ಚಿನ ಆಹಾರವಾಗಿದ್ದ ಮೇಕೆ ಹಾಲು ಪೌಷ್ಟಿಕವಾಗಿ ಶ್ರೇಷ್ಠವಾಗಿದೆ. ಅಸ್ತಮಾ, ಶೀತ, ಕಾಮಾಲೆ ರೋಗಗಳ ನಿವಾರಣೆಗೆ ರಾಮಬಾಣವಾಗಿದೆ. ಆದ್ದರಿಂದ ಮೇಕೆ ಹಾಲಿನ ಡೇರಿ ಪ್ರಾರಂಭಿಸಿ ವೈಜ್ಞಾನಿಕ ಸಂಸ್ಕರಣಾ ಘಟಕಗಳನ್ನು ವಿಭಾಗಕ್ಕೊಂದರಂತೆ ಸ್ಥಾಪಿಸಲು ಕ್ರಮವಹಿಸಲಾಗಿದೆ ಎಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಯಮನಪ್ಪ ಹೊರಟ್ಟಿ ಮಾತನಾಡಿ, ಸರ್ಕಾರ ಕುರಿಗಾರನ ಹತ್ಯೆ ಸೇರಿ ಎಲ್ಲ ಹಿಂಸಾತ್ಮಕ ಘಟನೆಗಳಿಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದರು.
ಬಿ.ಎಲ್.ಬಬಲಾದಿ, ರಾಮಣ್ಣಾ ಕಿಲಾರಿ, ಸುರೇಶ ಸಿದ್ದಾಪುರ, ಮಂಜು ಕಿಲಾರಿ, ಕೃಷ್ಣಾ ಕರಡಿಗುಡ್ಡ, ನಾಗಪ್ಪ ಕುರಿ, ಪ್ರಕಾಶ ದೊಡಮನಿ, ಶ್ರೀಕಾಂತ ಪೂಜಾರ, ವೆಂಕಪ್ಪ ಕುರಿ ಇನ್ನಿತರರು ಇದ್ದರು.