ಮೊಳಕಾಲ್ಮೂರು: ಬೆಳೆ ವಿಮೆ ವಿಷಯದಲ್ಲಿ ಕೃಷಿಕರು ನಿರಂತರ ಮೋಸಕ್ಕೆ ಒಳಗಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಉಳಿದಿಲ್ಲ. ನಾವು ಪ್ರತಿ ವರ್ಷ ಕಟ್ಟುವ ಹಣಕ್ಕೆ ಬಾಂಡ್ ಕೊಡಬೇಕು. ಎಲ್ಲ ಬೆಳೆಗಳಿಗೆ ಪರಿಹಾರ ಕೊಡಬೇಕು…
ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಸೀಲ್ದಾರ್ ಎಂ.ವಿ.ರೂಪಾ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಕುಂದು-ಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ ರೀತಿ ಇದು.
ರೈತ ಸಂಘದ ತಾಲೂಕಾಧ್ಯಕ್ಷ ರವಿಕುಮಾರ ಮಾತನಾಡಿ, ವಿಮೆ ಹಣ ಕಷ್ಟ ಕಾಲದಲ್ಲಿ ರೈತರ ಕೈಗೆ ಸಿಗುತ್ತದೆ ಎಂಬು ನಂಬಿದ್ದೇವು. ಆದರೆ, ಅದು ಹುಸಿಯಾಗಿದೆ. ಕಳೆದ 10 ವರ್ಷಗಳಿಂದ ಬೆಳೆ ನಷ್ಟ ಉಂಟಾಗುತ್ತಿದ್ದರೂ ಸೂಕ್ತ ಪರಿಹಾರ ಕೊಟ್ಟಿಲ್ಲ ಎಂದು ದೂರಿದರು.
ಆಂಧ್ರ ಮಾದರಿ ನಮ್ಮ ರಾಜ್ಯದಲ್ಲಿ ಪಾಲನೆ ಆಗುತ್ತಿಲ್ಲ. ವಿಮಾ ಕಂಪನಿಗಳ ಅಭಿವೃದ್ಧಿಗಾಗಿ ಕೋಟ್ಯಂತರ ಹಣ ಸಂಗ್ರಹಿಸುವ ಬಹುದೊಡ್ಡ ಜಾಲವಾಗಿದೆ ವಿಮೆ ಪಾವತಿ ಎಂದು ಆರೋಪಿಸಿದರು.
ರೈತ ಮುಖಂಡ ಎಚ್.ಟಿ.ಚಂದ್ರಣ್ಣ ಮಾತನಾಡಿ, ಫಸಲ್ ಬಿಮಾ ಯೋಜನೆ ಜಾರಿಗೊಂಡು 10 ವರ್ಷ ಕಳೆದರೂ ಗ್ರಾಮೀಣ ರೈತರಿಗೆ ಸರಿಯಾದ ಮಾಹಿತಿ ತಲುಪಿಸುವ ಕೆಲಸ ಆಗಿಲ್ಲ ಎಂದು ಬೇಸರಿಸಿದರು.
ಸಿಪಿಐ ಸಂಘಟನೆ ತಾಲೂಕು ಕಾರ್ಯದರ್ಶಿ ಮಹಮದ್ ಜಾಫರ್ ಮಾತನಾಡಿ, ಯೋಜನೆ ದಾರಿ ತಪ್ಪುತ್ತಿದ್ದು, ರೈತರ ಪಾಲಿಗೆ ಉ;ಪಯೋಗವಿಲ್ಲ ಎಂದರು.
ತಹಸೀಲ್ದಾರ್ ಎಂ.ವಿ.ರೂಪಾರ ಮಾತನಾಡಿ, ಕೃಷಿಕರ ಸಬಲೀಕರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನ ಜಾರಿಗೆ ತಂದಿವೆ. ಅವು ಸಮಗ್ರವಾಗಿ ಜನರಿಗೆ ತಲುಪಲು ಅಧಿಕಾರಿಗಳು ಬದ್ಧತೆ ಮೆರೆಯಬೇಕು. ನಿರ್ಲಕ್ಷೃ ವಹಿಸಿದರೆ ಸಹಿಸುವುದಿಲ್ಲೆ ಎಂದು ಎಚ್ಚರಿಸಿದರು.
ಕೃಷಿ ಅಧಿಕಾರಿ ಡಾ.ಉಮೇಶ್ ಮಾತನಾಡಿ, ಮಳೆ ಕೊರತೆಯಿಂದ ಆಗಿರುವ ಬೆಳೆ ನಷ್ಟ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಸುಧಾಕರ, ರೇಷ್ಮೆ ವಿಸ್ತರಣಾಧಿಕಾರಿ ಪರಮೇಶ್ವರಪ್ಪ, ನಿರಂಜನಮೂರ್ತಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಹನುಮಂತರಡ್ಡಿ, ಮೌನರಡ್ಡಿ, ಕನಕಶಿವಮೂರ್ತಿ ಇದ್ದರು.