ಜಿಲ್ಲೆ

ಸಮಸ್ಯೆಗಳ ಪರಿಹಾರಕ್ಕೆ ನಿಗದಿಯಾಗಲಿಲ್ಲ ಕಾಲಮಿತಿ

ವಿವೇಕಾನಂದ ದಾಸನಕೊಪ್ಪ

ಹಾನಗಲ್ಲ: ಹಂದಿ- ನಾಯಿಗಳ ಹಾವಳಿ, ಟ್ರಾಫಿಕ್ ಸಮಸ್ಯೆ, ವಿದ್ಯುತ್ ಕಡಿತ, ರಸ್ತೆ ಗುಂಡಿ ಹಾಗೂ ಆನೆಕೆರೆ ಬಳಿ ಕುಡುಕರ ಹಾವಳಿಯಂತಹ ಹಲವು ವಿಷಯಗಳ ಬಗ್ಗೆ ಪಟ್ಟಣದ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತಾದರೂ, ಸಮಸ್ಯೆಗಳ ಪರಿಹಾರಕ್ಕೂ ಕಾಲಮಿತಿ ನಿಗದಿಯಾಗಲಿಲ್ಲ.

ಸೋಮವಾರ ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷಉಪಾಧ್ಯಕ್ಷರ ಮೊದಲ ಸಾಮಾನ್ಯ ಸಭೆ ಉತ್ಸಾಹದಿಂದ ಆರಂಭವಾಗಿ ಸಮಸ್ಯೆಗಳ ಚರ್ಚೆನಡೆದವೇ ಹೊರತು, ಅವುಗಳ ಪರಿಹಾರಕ್ಕೆ ನಿಗದಿತ ಯೋಜನೆ ರೂಪಿಸಲಿಲ್ಲ.

ಪಟ್ಟಣದಲ್ಲಿ ಹಂದಿ ಹಾವಳಿಯಿಂದ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಬೀದಿ ನಾಯಿಗಳು ಶಾಲಾ ಮಕ್ಕಳು, ಸಾರ್ವಜನಿಕರ ಮೇಲೆರಗುತ್ತಿವೆ. ಹಂದಿಗಳ ಸ್ಥಳಾಂತರಕ್ಕೆ ಪ್ರತಿ ಸಭೆಯಲ್ಲಿ ಚರ್ಚೆಯಾಗುತ್ತಿದೆಯೆ ವಿನಃ ಕ್ರಮವಾಗುತ್ತಿಲ್ಲ ಎಂದು ಮಾಜಿ ಅಧ್ಯಕ್ಷೆ ಹಸಿನಾಬಿ ನಾಯ್ಕನವರ ಗಮನ ಸೆಳೆದರು. ಎಲ್ಲ ಸದಸ್ಯರು ಕೂಡಲೇ ಕ್ರಮ ಜರುಗಿಸಲು ಮುಖ್ಯಾಧಿಕಾರಿಗೆ ಒಕ್ಕೊರಲಿನಿಂದ ಆಗ್ರಹಿಸಿದರು. ಆದರೆ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಸಮಸ್ಯೆ ಪರಿಹಾರಕ್ಕೆ ಕಾಲಮಿತಿಯ ಭರವಸೆ ನೀಡಲಿಲ್ಲ.

ವಿದ್ಯುತ್ ಕಡಿತದಿಂದಾಗಿ ಕುಡಿಯುವ ನೀರು ಶುದ್ಧೀಕರಣ ಘಟಕಕ್ಕೆ ನೀರು ಪೂರೈಸಲು ಸಮಸ್ಯೆಯಾಗಿದೆ ಎಂದು ಸದಸ್ಯರು ಆರೋಪಿಸಿದರು. ಆಗ ಹೆಸ್ಕಾಂ ಅಧಿಕಾರಿ ಎಸ್.ಆನಂದ, ಕೂಡಲೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಮಹಾತ್ಮ ಗಾಂಧಿ ವೃತ್ತ ಹಾಗೂ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್, ವಾಹನ ನಿಲುಗಡೆ, ಪುಟ್​ಪಾತ್ ತೆರವಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಪಿಎಸ್​ಐ ಸಂಪತ್ ಆನಿಕಿವಿ ಅವರಿಗೆ ಸದಸ್ಯರು ಒತ್ತಾಯಿಸಿದರು. ಮುಖ್ಯರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದು ವಾಹನ ಓಡಾಟಕ್ಕೆ ಸಮಸ್ಯೆಯಾಗಿದೆ. ದುರಸ್ತಿ ಆಗುತ್ತಿಲ್ಲ. ಈ ನಿರ್ಲಕ್ಷಕ್ಕೆ ಕಾರಣ ತಿಳಿಯುತ್ತಿಲ್ಲ ಎಂದು ಸದಸ್ಯರು ಲೋಕೋಪಯೋಗಿ ಇಲಾಖೆ ಅಧಿಕಾರಿ ಮಾಲತೇಶ ಅವರಿಗೆ ಪ್ರಶ್ನಿಸಿದರು. ಆದರೆ, ಅವರಿಂದ ಉತ್ತರ ಮಾತ್ರ ಸಿಗಲಿಲ್ಲ. ಪಟ್ಟಣಕ್ಕೆ ಕುಡಿಯುವ ನೀರಿನ ಮೂಲವಾದ ಆನೆಕೆರೆ ಏರಿಯ ರಸ್ತೆ ಹಾಗೂ ಅದರ ಒಳಭಾಗದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಬೇಕು ಎಂದು ಸದಸ್ಯರು ಮುಖ್ಯಾಧಿಕಾರಿಗೆ ಸೂಚಿಸಿದರು.

ಪುರಸಭೆಯ 28 ವಾಣಿಜ್ಯ ಮಳಿಗೆ ಖಾಲಿಯಿವೆ. ಹರಾಜು ಕರೆದರೂ ಯಾರೂ ಸೂಕ್ತ ಬಾಡಿಗೆಗೆ ಕೇಳುತ್ತಿಲ್ಲ. ಜಿಲ್ಲಾಧಿಕಾರಿ ಅನುಮತಿ ಪಡೆದು ರಿಯಾಯತಿ ಬಾಡಿಗೆಯಲ್ಲಿ ಹರಾಜು ಮಾಡುವ ಯೋಚನೆಯಿದೆ. ಇದಕ್ಕೆ ಸಭೆ ಅನುಮತಿಸಬೇಕು ಎಂದು ಮುಖ್ಯಾಧಿಕಾರಿ ಮಾಡಿದ ಮನವಿಗೆ ಸಭೆ ಒಪ್ಪಿಗೆ ನೀಡಿತು. ಎಸ್​ಬಿಐ ಬಳಿ ಇರುವ ಎಗ್​ರೈಸ್ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಸದಸ್ಯರು ಸೂಚಿಸಿದರು. 70 ಲಕ್ಷ ರೂಪಾಯಿ ತೆರಿಗೆ ಬಾಕಿ ವಸೂಲಿಗಾಗಿ ಸ್ತ್ರೀಶಕ್ತಿ ಗುಂಪುಗಳಿಗೆ ಕಮಿಷನ್ ಆಧಾರದಲ್ಲಿ ಜವಾಬ್ದಾರಿ ನೀಡಿ ವಸೂಲಿಗೆ ಸಭೆ ಅನುಮತಿ ನೀಡಿತು. ನಾಲ್ಕಾರು ತಿಂಗಳಿಗೊಮ್ಮೆಯಾದರೂ ಪಟ್ಟಣದ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಜರುಗಿಸಿ ಎಂದು ಸದಸ್ಯರು ಒತ್ತಾಯಿಸಿದರು.

ಅಧ್ಯಕ್ಷೆ ಮಮತಾ ಆರೆಗೊಪ್ಪ ಅಧ್ಯಕ್ಷತೆ, ಉಪಾಧ್ಯಕ್ಷೆ ವೀಣಾ ಗುಡಿ, ಸದಸ್ಯರಾದ ನಾಗಪ್ಪ ಸವದತ್ತಿ, ಎಸ್.ಕೆ. ಪೀರಜಾದೆ, ಖುರ್ಷಿದಅಹ್ಮದ ಹುಲ್ಲತ್ತಿ, ಸದಸ್ಯರಾದ ಮಹೇಶ ಪವಾಡಿ, ಶೋಭಾ ಉಗ್ರಣ್ಣನವರ, ರಾಧಿಕಾ ದೇಶಪಾಂಡೆ, ವಿರೂಪಾಕ್ಷಪ್ಪ ಕಡಬಗೇರಿ, ಮೇಕಾಜಿ ಕಲಾಲ, ಗನಿ ಪಾಳಾ, ಶಂಶಿಯಾಬಾನು ಬಾಳೂರ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.