ಮೈಸೂರು: ಈ ಬಾರಿ ಶಾಲಾ ಪಠ್ಯ ಪುಸ್ತಕದ ಪರಿಷ್ಕೃರಣೆ ಮಾಡುವುದಿಲ್ಲ, ಕಳೆದ ಬಾರಿಯೇ ಪಠ್ಯದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಈ ಬಾರಿ ಕೆಲವು ವ್ಯಾಕರಣ ಹಾಗೂ ಪದಗಳ ಬದಲಾವಣೆ ಮಾತ್ರ ಮಾಡಲಾಗಿದೆ, ತಪ್ಪಿದ್ದ ವ್ಯಾಕರಣ ಸರಿ ಮಾಡಲಾಗಿದೆ. ಈಗಾ ಗಲೇ ಶೇ.95 ರಷ್ಟು ಪಠ್ಯಪುಸ್ತಕ ಹಾಗೂ ಸಮವಸ್ತ್ರ ಪೂರೈಕೆ ಮಾಡಲಾಗಿದ್ದು, ಮೇ ಅಂತ್ಯದೊಳಗೆ ಶೇ.100 ರಷ್ಟು ಪೂರೈಕೆ ಮಾಡಲಾಗು ವುದು. ಶೂ ಖರೀದಿಗೆ ಎಸ್‌ಡಿಎಂಸಿ ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಗಿದ್ದು, 15 ದಿನಗಳ ಒಳಗೆ ಶೂ ಖರೀದಿಸಿ ನೀಡುತ್ತಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ನಾವು ಶಿಕ್ಷಕರಿಗೆ ಒತ್ತಡ ಹೇರುತ್ತಿಲ್ಲ. ಈ ಹಿಂದೆ ಒತ್ತಡ ಹೇರುವ ವ್ಯವಸ್ಥೆ ಇತ್ತು. ಶಿಕ್ಷಕರ ಮೇಲೆ ಪ್ರಭಾವ ಬಳಸಿ ಮತ ಹಾಕಿಸಲು ಯತ್ನಿಸುತ್ತಿದ್ದರು. ಶಿಕ್ಷಕರು ಶಿಕ್ಷಣದ ಬಗ್ಗೆ ಮಾತ್ರ ಕಾಳಜಿ ವಹಿಸಬೇಕು, ರಾಜಕೀ ಯದಲ್ಲಿ ತೊಡಗಬಾರದು. ಒಂದು ವೇಳೆ ಶಿಕ್ಷಕರು ರಾಜಕೀಯದಲ್ಲಿ ತೊಡಗಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 500 ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲಾಗುವುದು. ಮುಂದಿನ 3 ವರ್ಷಗಳಲ್ಲಿ ಎಸ್‌ಆರ್ ನಿಧಿ ಬಳಸಿಕೊಂಡು 3 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸುವ ಗುರಿ ಇದೆ. ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳು ಇದ್ದು, 2 ಪಂಚಾಯಿತಿಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಲಾಗುವುದು. ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭಕ್ಕೆ 2 ಸಾವಿರ ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಹಾಗೂ ಇತರರು ಇದ್ದರು.