ಗುಳೇದಗುಡ್ಡ: ಪಟ್ಟಣದ ಗುಲಾಬ ಟಾಕೀಸ್‌ನಿಂದ ಹರದೊಳ್ಳಿ ಮಾರುತಿ ದೇವಸ್ಥಾನದವರೆಗಿನ ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡಬಾರದು. ಹೊಸದಾಗಿ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ನಾಗರಿಕರು ಮಂಗಳವಾರ ರಸ್ತೆ ದುರಸ್ತಿಗೆ ಬಂದಿದ್ದ ಕೆಲಸಗಾರರ ಕೆಲಸ ತಡೆದು ಪ್ರತಿಭಟಿಸಿದರು.
ಕಳೆದ 6 ವರ್ಷಗಳಿಂದ ಇದೇ ರಸ್ತೆ ಅಕ್ಕಪಕ್ಕ ಮನೆಯವರು ಜೀವನ ಸಾಗಿಸಿದ್ದೇವೆ. ಅದರ ಸಂಕಷ್ಟ ನಮಗೆ ಗೊತ್ತಿದೆ. ಈಗ ನಮಗೆ ತಾತ್ಕಾಲಿಕ ರಸ್ತೆ ದುರಸ್ತಿ ಬೇಕಿಲ್ಲ ಎಂದು ಒತ್ತಾಯಿಸಿ ನಿವಾಸಿಗಳು ಸ್ಥಳಕ್ಕೆ ಆಗಮಿಸಿದ್ದ ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಎಸ್.ಮೇಟಿ ಅವರಿಗೆ ಮನವಿ ನೀಡಿ ತಾತ್ಕಾಲಿಕ ರಸ್ತೆ ದುರಸ್ತಿ ತಡೆದರು.
ದಾನಮ್ಮ ಕಲ್ಯಾಣಿ, ಪೂರ್ಣಿಮಾ ಆಲೂರ, ಗೌರಮ್ಮ ಕಲಬುರ್ಗಿ, ಪುರಸಭೆ ಸದಸ್ಯ ಪ್ರಶಾಂತ ಜವಳಿ, ಭುವನೇಶ ಪೂಜಾರ, ದಿಲೀಪ್ ತೆಗ್ಗಿ, ಮಲ್ಲೇಶ ರಾಜನಾಳ, ಆದಪ್ಪ ಕಲಬುರ್ಗಿ, ಮಹೇಶ ಸೂಳಿಭಾವಿ, ಮಲ್ಲು ಹೆಗಡೆ, ಬಸವರಾಜ ಮ್ಯಾಗಿನಹಳ್ಳಿ, ಬಸು ಗೊಬ್ಬಿ ಇತರರು ಇದ್ದರು.