ರಾಯಚೂರು ಶಿಕ್ಷಣದೊಂದಿಗೆ ನಮ್ಮ ಧಾರ್ಮಿಕ, ಭಾರತೀಯ ಸಂಸ್ಕೃತಿಯನ್ನು ಮನೆಯಲ್ಲಿ ಮಕ್ಕಳಿಗೆ ನೀಡುವುದು ಬಹಳ ಅವಶ್ಯಕವಗಿದೆಂದು ಕಿಲ್ಲೇಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕಿಲ್ಲೇಬೃಹನ್ಮಠದಲ್ಲಿ ಭಾನುವಾರ ತಾಲೂಕಾ ಬೇಡ ಜಂಗಮ ಸಮಿತಿಯಿಂದ ಆಯೋಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾದನೆಗೈದ ಜಂಗಮ ಸಮಾಜದ ಸಾಧಕರ ಸನ್ಮಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.ಇಂದು ಬದುವುದಕ್ಕೆ ಉನ್ನತ ಶಿಕ್ಷಣ ಎಷ್ಟು ಮುಖ್ಯವೋ ನಮ್ಮತನವನ್ನು ಉಳಿಸಿ ಬೆಳೆಸುವುದಕ್ಕೆ ಧಾರ್ಮಿಕ ಆಚರಣೆಗಳ ಶಿಕ್ಷಣವೂ ಅಷ್ಟೇ ಮುಖ್ಯವಾಗಿದ್ದು , ಉನ್ನತ ಶಿಕ್ಷಣ ನೀಡುವ ಧಾವಂತದಲ್ಲಿ ನಮ್ಮ ಧರ್ಮದ ಸಂಸ್ಕೃತಿಯನ್ನು ನೀಡದೇ ನಮ್ಮ ಮಕ್ಕಳಿಗೆ ವಂಚನೆಯನ್ನು ಮಾಡಬಾರದು ಎಂದರು.
ಸುಲ್ತಾನಪುರದ ಪಂಚಾಕ್ಷರಿ ಸಂಸ್ಥಾನ ತೀರ್ಥಬೃಹನ್ಮಠದ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯಾರಲ್ಲಿ ಧರ್ಮ ಹಾಗೂ ಸಂಸ್ಕಾರ ಪಾಲನೆ ಇರುವುದಿಲ್ಲವೋ ಅಂತಹವರು ಈ ಸಮುದಾಯದಲ್ಲಿ ಇರುವುದಕ್ಕೆ ಅರ್ಹರಾಗುವುದಿಲ್ಲ. ಜಂಗಮರು ಕಟ್ಟು ನಿಟ್ಟಿನ ಧಾರ್ಮಿಕ ಸಂಸ್ಕಾರವನ್ನುಪಾಲನೆ ಮಾಡಬೇಕು ಎಂದು ತಿಳಿಸಿದರು.
ಶಾಸಕ ಶಿವರಾಜ ಪಾಟೀಲ ಮಾತನಾಡಿ, ಜಂಗಮ ಸಮಾಜದಿಂದ ಎಲ್ಲರಿಗೂ ಒಳಿತಾಗಿದೆ. ಜಂಗಮರು ಸಮಾಜದ ಹಿತ ಬಯಸಿದರೂ ಅವರು ಕಷ್ಟದಲ್ಲಿದ್ದಾರೆ.
ನಿಮ್ಮ ಹೃದಯ ಶ್ರೀಮಂತಿಕೆಗೆ ಯಾವುದು ಸಮವಲ್ಲ. ನಗರದ ಹೊರವಲಯದಲ್ಲಿನ ಬೈಪಾಸ್ ಮಧ್ಯೆದಲ್ಲಿ ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆಗೆ 25 ಲಕ್ಷ ಕೊಟ್ಟಿದ್ದೇನೆ. ಇನ್ನೊಂದು ಬೈಪಾಸ್ ರಸ್ತೆ ನಿರ್ಮಾಣವಾಗುತ್ತಿದೆ. ಅದೇ ಜಾಗದಲ್ಲಿ ಸ್ಥಾಪನೆ ಮಾಡಲಾಗುವುದು. ಜಂಗಮ ವಟುಗಳ ಪೌರೋಹಿತ್ಯ, ಧಾರ್ಮಿಕ ಶಿಕ್ಷಣಕ್ಕೆ ಗುರುಭವನ ನಿರ್ಮಾಣ ಆಗಬೇಕಿದೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡುವದಾಗಿ ತಿಳಿಸಿದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಂಗಮ ಸಮಾಜದ ಡಾ.ಬಿ.ವಿಜಯರಾಜೇಂದ್ರ, ಮಲ್ಲಿಕಾರ್ಜುನ ಬಿ.ಎಂ., ಗುರುಸಿದ್ದಯ್ಯಸ್ವಾಮಿ ಹಿರೇಮಠ, ಬಸವರಾಜ ಅಲ್ಕೂರು, ಡಾ.ಪ್ರಕಾಶಯ್ಯಸ್ವಾಮಿ ನಂದಿ, ನಸವರಾಜಯ್ಯಸ್ವಾಮಿ ಯರಡೋಣಿ, ಡಾ. ಜೆ.ಎಂ.ಶರಣಯ್ಯಸ್ವಾಮಿ, ಎಸ್.ಜಿ.ಕಲ್ಲಯ್ಯ ಸ್ವಾಮಿ ಸೇರಿ ಅನೇಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳವಾರಪೇಟೆ ಹಿರೇಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ತಿಪ್ಪರಾಜ ಹವಲ್ದಾರ ಸೇರಿದಂತೆ ಅನೇಕರು ಇದ್ದರು.