ಮಡಿಕೇರಿ:
ಶುಕ್ರವಾರದ ಕರ್ನಾಟಕ ಬಂದ್‌ಗೆ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕೊಡಗಿನಲ್ಲೂ ಬೆಂಬಲ ಕೊಡುವುದಿಲ್ಲ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ತಿಳಿಸಿದ್ದಾರೆ.
ರಾಜ್ಯ ಬಂದ್ ಕರೆಯುವದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಕಷ್ಟ. ಕಾರ್ಮಿಕರು ಸೇರಿ ದಿನನಿತ್ಯ ದುಡಿದು ತಿನ್ನುವವರು ಮತ್ತು ಸಾರ್ವಜನಿಕರಿಗೆ ಇದರಿಂದ ತೊಂದರೆ ಆಗುತ್ತದೆ. ಹಲವಾರು ದಿನಗಳಿಂದ ಕರವೇ ಕರ್ನಾಟಕದ ಮೂಲೆ ಮೂಲೆಯಲ್ಲೂ ಹೋರಾಟ ನಡೆಸುತ್ತಿದೆ. ಇನ್ನು ಮುಂದೆಯೂ ನಡೆಯುತ್ತದೆ. ಈಗಾಗಲೇ ವಿಧಾನಸೌಧ ಮುಖ್ಯಮಂತ್ರಿಗಳ ಕಚೇರಿ, ಮನೆಗಳಿಗೆ, ಕೇಂದ್ರ ಸರ್ಕಾರದ ಕಚೇರಿಗಳಿಗೆ ಮುತ್ತಿಗೆ, ಕೊಡಗಿನಲ್ಲಿ ಹಾರಂಗಿ ಜಲಾಶಯ ಮುತ್ತಿಗೆ, ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟದಲ್ಲೂ ಬೃಹತ್ ಹೋರಾಟ ನಡೆಸಲಾಗಿದೆ. ಆದ್ದರಿಂದ ಹೋರಾಟಕ್ಕೆ ಬೆಂಬಲವಿದೆಯೇ ಹೊರತೂ ಬಂದ್‌ಗೆ ಯಾವುದೇ ರೀತಿಯ ಬೆಂಬಲ ಇರುವುದಿಲ್ಲ ಎಂದು ಪ್ರತಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಾವೇರಿ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಇದು ಹಲವಾರು ವರುಷದ ಸಮಸ್ಯೆ. ಇದರ ಪರ ಹೋರಾಟ ಮಾಡಿದವರು ಹಲವಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಹೋರಾಟದಲ್ಲಿ ಪೊಲೀಸರ ಬೂಟು ಲಾಠಿ ಏಟಿಗೆ ತುತ್ತಾಗಿದ್ದಾರೆ. ಆದರೂ ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ರಾಜ್ಯದ ಮೂಲೆಮೂಲೆಯಲ್ಲೂ ಬಹಳಷ್ಟು ದೊಡ್ಡ ದೊಡ್ಡ ಹೋರಾಟಗಳು ನಡೆದು ಕೇಸ್ ಹಾಕಿಸಿ ಕೊಂಡಿದ್ದಾರೆಯೇ ಹೊರತೂ ಇಲ್ಲಿಯವರೆಗೆ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ರಾಜಕೀಯ ಹಿತಾಸಕ್ತಿ ಕಾರಣಕ್ಕೆ ನಮ್ಮ ರಾಜ್ಯಕ್ಕೆ ಆಸರೆಯಾಗಿ ನಿಲ್ಲಲಿಲ್ಲ.
ಕೊಡಗಿನಲ್ಲಿ ಹುಟ್ಟಿ ಹರಿವ ಕಾವೇರಿ ನೀರು ಇವತ್ತು ಕೊಡಗಿನವರಿಗೆ ಇಲ್ಲ ಎಂಬಂತಾಗಿದೆ. ಇಡೀ ಕರ್ನಾಟಕ ಕಾವೇರಿ ನೀರನ್ನೇ ನಂಬಿ ಕುಳಿತಿದೆ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡುವುದಾದರೂ ಹೇಗೆ ಸಾಧ್ಯ. ಕರ್ನಾಟಕದ ಜನರ ಕಷ್ಟ ದುಃಖಗಳನ್ನು ಕೇಳುವವರೇ ಗತಿಯಿಲ್ಲದಂತಾಗಿದೆ. ರೈತರು ರೊಚ್ಚಿಗೆದ್ದು ನಿಂತಿದ್ದಾರೆ. ಹೀಗೆ ಆದರೆ ಜನರ ಜೀವನ ಕಷ್ಟಕರವಾಗುತ್ತದೆ. ಆತ್ಮಹತ್ಯೆಗಳ ಪರಂಪರೆ ಮುಂದುವರೆಯುತ್ತದೆ. ಆದ್ದರಿಂದ ಸಂಬಂಧಪಟ್ಟವರು ಇದನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಒತ್ತಾಯಿಸಿದ್ದಾರೆ.