ಜಿಲ್ಲೆ

ಕುಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಾಡಲ್ಲ-ಸಚಿವ ಮಂಕಾಳ ವೈದ್ಯ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ ಕುಮಟಾಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಭಾಗ್ಯ ಕೈ ತಪ್ಪಲಿದೆ.

ಹಿಂದಿನ ಬಿಜೆಪಿ ಸರ್ಕಾರ ಕುಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ನಾನು ಬೇರೆಡೆ ಜಾಗ ಗುರುತಿಸುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.

ತೀವ್ರ ಹೋರಾಟ

ಉತ್ತರ ಕನ್ನಡ ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಬೇಡಿಕೆ ಹಲ ವರ್ಷಗಳಿಂದ ಇದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಈ ಹಕ್ಕೊತ್ತಾಯ ತೀವ್ರವಾಗಿತ್ತು.

ವಿಶೇಷವಾಗಿ ಯುವ ಜನತೆ ಸಾಮಾಜಿಕ ಜಾಲತಾಣಗಳ ಮೂಲಕ ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಸಿದ್ದರು. ಜನರ ಒತ್ತಡಕ್ಕೆ ಮಣಿದ ಹಿಂದಿನ ಬಿಜೆಪಿ ಶಾಸಕರು ಇದಕ್ಕಾಗಿ ಸದನದಲ್ಲಿ ಧ್ವನಿ ಎತ್ತಿದ್ದರು. ವಿಶೇಷ ಸಭೆ ನಡೆಸಿದ್ದರು.

ಶಿರಸಿಗೆ ಆಗಮಿಸಿದ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಕುಮಟಾದಲ್ಲೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಾಗಿ ಘೋಷಿಸಿದ್ದರು. ಬಜೆಟ್‌ನಲ್ಲೂ ಹಣ ಮಂಜೂರು ಮಾಡಿದ್ದರು. ಸ್ಥಳ ಗುರುತಿಸುವ ಕಾರ್ಯವೂ ನಡೆದಿತ್ತು.

ಆದರೆ, "ನಾವು ಸರ್ಕಾರದ ಅವಧಿ ಮುಗಿಯುವುದರೊಳಗೆ ಶಂಕುಸ್ಥಾಪನೆ ಮಾಡುತ್ತೇವೆ" ಎಂಬ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ಹಾಗೆಯೇ ಉಳಿಯಿತು.

ಈಗ ಬಂದ ಕಾಂಗ್ರೆಸ್‌ ಸರ್ಕಾರ ಕುಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಯಾವುದೇ ಅನುದಾನ ಇಟ್ಟಿರಲಿಲ್ಲ. ಅಲ್ಲದೆ, ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರಿಸಿದ್ದ ಸಚಿವ ಶರಣಪ್ರಕಾಶ ಪಾಟೀಲ, "ಜಾಗ ಪಕ್ಕಾ ಆದ ನಂತರ ಅನುದಾನ ನೋಡಿಕೊಂಡು ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು" ಎಂದಿದ್ದರು.

ಆದರೆ, ಶನಿವಾರ ಕಾರವಾರದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಅವರು, ಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಮಾಡಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮೊದಲು ಕಾರವಾರ ಮೆಡಿಕಲ್ ಕಾಲೇಜ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳನ್ನು ಕಲ್ಪಿಸಲಿದ್ದೇವೆ ಸಚಿವ ಮಂಕಾಳ ವೈದ್ಯ ಹೇಳಿದರು.
ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲೇ ಕಾರವಾರಕ್ಕೆ ಮೆಡಿಕಲ್ ಕಾಲೇಜ್ ತರಲಾಗಿತ್ತು. ಇಲ್ಲಿ ಬೇಕಾದ ತಜ್ಞ ವೈದ್ಯರನ್ನು ನೇಮಕ ಮಾಡುವ ಕ್ರಮವಾಗಲಿದೆ ಎಂದರು.

ಇದನ್ನೂ ಓದಿ:ಸರ್ಕಾರದಲ್ಲಿ ಹಣ ಇದೆ, ಅಗತ್ಯ ಯೋಜನೆ ಜಾರಿ ಮಾಡುತ್ತೇವೆ, ಮಂಕಾಳ ವೈದ್ಯ
"ಸರ್ಕಾರದ ಬಳಿ ಆಗದಿದ್ದರೆ ನಾನು ವೈಯಕ್ತಿಕವಾಗಿಯಾದರೂ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇನೆ ಎಂದು ಹಿಂದೆ ನಾನು ಮಾಜಿಯಾಗಿದ್ದಾಗ ಹೇಳಿದ್ದೆ. ಈಗ ಸಚಿವನಾದ ನಂತರವೂ ನಾನು ಅದಕ್ಕೆ ಬದ್ಧನಾಗಿದ್ದೇನೆ.

ಕಾರವಾರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿರುವುದರಿಂದ ಸಮೀಪದಲ್ಲೇ ಎಂದರೆ ಕುಮಟಾದಲ್ಲಿ ಮತ್ತೊಂದು ಆಸ್ಪತ್ರೆ ಬೇಕೆನ್ನಿಸದರು.

ಇದರಿಂದ ಹೊನ್ನಾವರ ಅಥವಾ ಬೇರೆ ಕಡೆ ಸ್ಥಳ ಪರಿಶೀಲನೆ ಮಾಡುತ್ತಿದ್ದೇನೆ. ಸ್ಥಳ ಗುರುತಿಸಿ ಮಾಡುತ್ತೇನೆ" ಎಂದರು.