ಚಿಕ್ಕಮಗಳೂರು: ದೇಶಾದ್ಯಂತ ಏ.11ರಿಂದ 14 ರವರೆಗೆ ಕರೊನಾ ಲಸಿಕಾ ಉತ್ಸವ ಹಮ್ಮಿಕೊಂಡಿದ್ದು ನಾಗರಿಕರು ಲಸಿಕೆ ಪಡೆದುಕೊಳ್ಳುವ ಮೂಲಕ ರಾಜ್ಯ ಹಾಗೂ ಜಿಲ್ಲೆಯನ್ನು ಕರೊನಾ ಮುಕ್ತಗೊಳಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಕೋರಿದರು. ನಗರದ ಸಿಂಡಿಕೇಟ್ ಬ್ಯಾಂಕ್ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ-ಎ.ನಲ್ಲಿ ಭಾನುವಾರ ಕರೊನಾ ಲಸಿಕಾ ಉತ್ಸವಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಕರೊನಾ ಲಸಿಕೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಯಾವುದೇ ಗೊಂದಲಕ್ಕೆ ಒಳಗಾಗದೆ 45 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದರು.
ನಿಯಮ ಉಲ್ಲಂಘಿಸಿದರೆ ದಂಡ:
ಕರೊನಾ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಸಬೇಕು. ಇದಕ್ಕಾಗಿಯೇ ತಾಲೂಕು ಹಾಗೂ ಪಪಂ ವ್ಯಾಪ್ತಿಗಳಲ್ಲಿ ಮಾರ್ಷಲ್ ತಂಡಗಳನ್ನು ರಚಿಸಲಾಗಿದ್ದು ಯಾರಾದರೂ ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸಲಾಗುವುದು. ನಗರ ಭಾಗದಲ್ಲಿ ಹೆಚ್ಚಿನ ಜನಸಂದಣಿ ಇರುವ ಹಿನ್ನೆಲೆಯಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಾಗೃತಿ ಲಸಿಕೆ ಉತ್ಸವದ ಉದ್ದೇಶ:
ಜಿಲ್ಲಾ ಆರ್‍ಸಿಎಚ್ ಡಾ. ಭರತ್‍ಕುಮಾರ್ ಮಾತನಾಡಿ, ಸಾರ್ವಜನಿಕರಲ್ಲಿ ಲಸಿಕೆ ಪಡೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವುದೇ ಕರೊನಾ ಲಸಿಕಾ ಉತ್ಸವದ ಮುಖ್ಯ ಉದ್ದೇಶ. ಸರ್ಕಾರ ಸೂಚಿಸಿರುವ ಎಲ್ಲ ನಿಯಮ ಪಾಲಿಸಿ ಸೋಂಕು ಮುಕ್ತಗೊಳಿಸಬೇಕಿದೆ ಎಂದು ಹೇಳಿದರು. ತಿಂಗಳ ಬಳಿಕ 2ನೇ ಲಸಿಕೆ ಪಡೆದಾಗ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ಏ.15 ರಂದು ಜಿಲ್ಲೆಯ ಎಲ್ಲ ಗ್ರಾಪಂ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ. ಈ ಸಂದರ್ಭ ಆಯಾ ಭಾಗದ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಪಿಡಿಒಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಹಿರೇನಲ್ಲೂರಿನಲ್ಲಿ ಪಿಂಕ್ ಬೂತ್:
ಡಿಎಚ್‍ಒ ಡಾ. ಎಸ್.ಎನ್.ಉಮೇಶ್ ಮಾತನಾಡಿ, ಕರೊನಾ ಲಸಿಕಾ ಉತ್ಸವವನ್ನು ನಾಲ್ಕು ದಿನಗಳ ಕಾಲ ಆಯೋಜಿಸಿದ್ದು ಕಡೂರು ತಾಲೂಕು ಹಿರೇನಲ್ಲೂರಿನಲ್ಲಿ ಲಸಿಕೆ ಪಡೆಯಲು ಪಿಂಕ್ ಬೂತ್ ಆರಂಭಿಸಲಾಗಿದೆ. 45 ವರ್ಷ ಮೇಲ್ಪಟ್ಟವರು, ಹಿರಿಯ ನಾಗರಿಕರು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಉಪ ಕೇಂದ್ರಗಳಲ್ಲಿ ತಪ್ಪದೆ ಲಸಿಕೆ ಪಡೆದುಕೊಳ್ಳುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಪ್ರಸ್ತುತ 243 ಕರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಪ್ರತಿ ನಿತ್ಯ 1200 ಕರೊನಾ ಸ್ಯಾಂಪಲ್ ಪರೀಕ್ಷೆ ಮಾಡಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ನಿತ್ಯ ಸರಾಸರಿ 25 ಕರೊನಾ ಪ್ರಕರಣಗಳು ದಾಖಲಾಗುತ್ತಿವೆ. ಸರ್ಕಾರ ನೀಡಿರುವ ಗುರಿಯಲ್ಲಿ ಶೇ.69 ಸಾಧನೆ ಮಾಡಲಾಗಿದೆ. 15,050ರಲ್ಲಿ 10,412 ತಪಾಸಣೆ ನಡೆಸಿ ಗುರಿ ಸಾಧಿಸಲಾಗಿದೆ. ಕರೊನಾ ಲಸಿಕಾ ಉತ್ಸವದಲ್ಲಿ ಆರೋಗ್ಯಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದು, ಸರ್ವರ ಸಹಕಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಕರೊನಾ ನಿಯಂತ್ರಣಕ್ಕೆ ಶ್ರಮಿಸಲಾಗುವುದು ಎಂದು ಹೇಳಿದರು. ಎಸ್ಪಿ ಎಂ.ಎಚ್.ಅಕ್ಷಯ್, ಟಿಎಚ್‍ಒ ಡಾ. ಸೀಮಾ, ಡಾ. ದಿವ್ಯಾ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿದ್ದರು.