ವಿಜಯವಾಣಿ ಸುದ್ದಿಜಾಲ ಪುತ್ತೂರು
ತಾಲೂಕಾದ್ಯಂತ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ 3 ತಿಂಗಳಿನಿಂದ ಕೂಲಿ ಮೊತ್ತ ಪಾವತಿಯಾಗಿಲ್ಲ.
ಲಭ್ಯ ಮಾಹಿತಿ ಪ್ರಕಾರ ಜೂನ್ ಕೊನೆಯ ವಾರದಿಂದೀಚೆಗೆ ನರೇಗಾ ಶ್ರಮಿಕರಿಗೆ ಕೂಲಿ ಪಾವತಿಸಿಲ್ಲ. ಈ ಮೊತ್ತದಲ್ಲಿ ಶೇ.90ನ್ನು ಕೇಂದ್ರ ಮತ್ತು ಶೇ.10ನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದು, ಕೇಂದ್ರದಿಂದ ಬಿಡುಗಡೆಯಾಗಬೇಕಾದ ಮೊತ್ತ ಬಂದಿಲ್ಲ. ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆಯಾಗುವ ಮೊತ್ತ ಇದಾಗಿದ್ದು, ಮೂಲಗಳ ಪ್ರಕಾರ ಪುತ್ತೂರು- ಕಡಬ ತಾಲೂಕಿನಲ್ಲಿ 1,80,48,548 ರೂಪಾಯಿ ಕೂಲಿ ಹಣ ಪಾವತಿಯಾಗಲು ಬಾಕಿ ಇದ್ದು, 70 ಲಕ್ಷ ರೂಪಾಯಿ ಮೆಟೀರಿಯಲ್ ವೆಚ್ಚದ ಕೂಲಿ ಮೊತ್ತ ಬಾಕಿ ಇದೆ.
ದಿನಕ್ಕೆ 285ರೂ. ಸಂಬಳ: ನರೇಗಾದಲ್ಲಿ ವೇಜ್ (ಸಂಬಳ), ಮೆಟೀರಿಯಲ್ (ವಸ್ತುಗಳು) ಎಂಬ 2 ವಿಭಾಗದಲ್ಲಿ ಮೊತ್ತವನ್ನು ವಿಂಗಡಿಸುತ್ತಾರೆ. ಇದರ ಅನುಪಾತ 60:40 ಇರಬೇಕೆಂಬ ನಿಯಮವಿದೆ. ಕೆಲಸ ಮಾಡಿದ ಶ್ರಮಿಕರಿಗೆ ದಿನಕ್ಕೆ 285 ರೂ. ಗಳಂತೆ ಕೂಲಿ ನೀಡಲಾಗುತ್ತದೆ. ಇದನ್ನು ಎನ್‌ಎಂಆರ್ (ನಾಮಿನಲ್ ಮಸ್ಟರ್ ರೋಲ್) ಮಾಡಿ ಪ್ರತೀ ಗ್ರಾಪಂನಿಂದ ಕಳುಹಿಸಲಾಗುತ್ತದೆ. ಇದೇ ವೇಳೆ ನರೇಗಾ ಕಾಮಗಾರಿಗೆ ಬಳಸಲಾದ ವಸ್ತುಗಳ (ಕಲ್ಲು, ಕಬ್ಬಿಣ, ಸಿಮೆಂಟ್ ಇತ್ಯಾದಿ) ವೆಚ್ಚವನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ ಕಳುಹಿಸಲಾಗುತ್ತದೆ. ಮೆಟೀರಿಯಲ್ ವೆಚ್ಚವನ್ನು ಉನ್ನತ ಮಟ್ಟದಿಂದ ಪರಿಶೀಲನೆ ಮಾಡುವ ವಿಧಾನವಿದ್ದು, ಅದು ಅಂತಿಮಗೊಳ್ಳದೆ ಹಣ ಪಾವತಿಯಾಗುವುದಿಲ್ಲ.
ನಿರುದ್ಯೋಗ ಭತ್ಯೆ ನೀಡಲಿದೆಯೇ ಸರ್ಕಾರ?: ಗ್ರಾಪಂಗಳಿಂದ ಎನ್‌ಎಂಆರ್ ಮಾಡಿ ಕಳಿಸಲಾಗಿದೆ. ಸರ್ಕಾರವೇ ಹಣ ನೀಡಿಲ್ಲ. 15 ದಿನಗಳ ಒಳಗೆ ಕೂಲಿ ಪಾವತಿಸದಿದ್ದರೆ ಶೇ.25 ನಿರುದ್ಯೋಗ ಭತ್ಯೆ ನೀಡಬೇಕೆಂಬ ನಿಯಮ ನರೇಗಾದಲ್ಲಿದೆ. ಸರ್ಕಾರ ಇದನ್ನು ಪಾಲಿಸಬೇಕು ಎಂದು ಸಾಮಾಜಿಕ ಮುಖಂಡ ಮಹಮ್ಮದ್ ಬಡಗನ್ನೂರು ವಿಜಯವಾಣಿಗೆ ತಿಳಿಸಿದ್ದಾರೆ.
ಕ್ರಿಯಾ ಯೋಜನೆಯಲ್ಲೇ ಎಡವಟ್ಟು: ಒಂದು ಮೂಲಗಳು ಹೇಳುವ ಪ್ರಕಾರ ಪುತ್ತೂರಿನ ಬಹುತೇಕ ಗ್ರಾಪಂಗಳು ಕ್ರಿಯಾ ಯೋಜನೆ ಸಲ್ಲಿಸುವಾಗ ಮಾಡುವ ಎಡವಟ್ಟು ಇದಕ್ಕೆ ಕಾರಣ. ಮುಂಗಡವಾಗಿ ತಯಾರಿಸುವ ಕ್ರಿಯಾ ಯೋಜನೆಯಲ್ಲಿ ಕೆಲಸಗಳ ಸ್ಪಷ್ಟ ಮಾಹಿತಿ, ವೆಚ್ಚದ ವಿವರವಿದ್ದರೆ ಸರ್ಕಾರ ಹಣ ಮೀಸಲಿಡಲು ಸಾಧ್ಯವಾಗುತ್ತದೆ. ಇನ್ನೊಂದು ಮೂಲಗಳ ಪ್ರಕಾರ ಪಿಡಿಒಗಳು ದಾಖಲೆ ಸಲ್ಲಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಉಂಟಾದ ವಿಳಂಬವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ನರೇಗಾ ಕೂಲಿ ಮೊತ್ತದಲ್ಲಿ ಶೇ.90ನ್ನು ಕೇಂದ್ರ ಮತ್ತು ಶೇ.10ನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದು, ಕೇಂದ್ರದಿಂದ ಬಿಡುಗಡೆಯಾಗಬೇಕಾದ ಮೊತ್ತ ಬಂದಿಲ್ಲ. ಮೆಟೀರಿಯಲ್ ವೇರಿಫಿಕೇಶನ್ ಆಗುವಲ್ಲಿ ವಿಳಂಬವಾದ ಕಾರಣ ಪಾವತಿ ತಡವಾಗಿದೆ. ಮುಂದಿನ ಒಂದೆರಡು ವಾರದೊಳಗೆ ಫಲಾನುಭವಿಗಳಿಗೆ ಹಣ ಜಮೆಯಾಗುವ ಭರವಸೆ ಇದೆ.
-ಡಾ.ಕುಮಾರ್, ದ.ಕ. ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ