ಜಿಲ್ಲೆ

ಅಕ್ಕಿಯೂ ಇಲ್ಲ; ಗೃಹಲಕ್ಷ್ಮೀ ಕಾಸೂ ಇಲ್ಲ; 13,316 ಅರ್ಜಿ ವಿಲೇವಾರಿ ಬಾಕಿ

ಮಂಜುನಾಥ ಅಂಗಡಿ

ಮಂಜುನಾಥ ಎಸ್. ಅಂಗಡಿ ಧಾರವಾಡ
ಕಾಂಗ್ರೆಸ್ ಸರ್ಕಾರ ‘ಗ್ಯಾರಂಟಿ’ ಯೋಜನೆಗಳ ಜಾರಿಯ ನಂತರ ಪಡಿತರ ಚೀಟಿಗೆ ಭಾರಿ ಬೇಡಿಕೆ ಬಂದಿದೆ. ಅದರಲ್ಲೂ ಗೃಹಲಕ್ಷ್ಮೀ ಯೋಜನೆಯ ಮಾಸಿಕ 2,000 ರೂ. ಪಡೆಯಬೇಕೆಂದರೆ ಯಾವುದಾದರೊಂದು ಪಡಿತರ ಚೀಟಿ ಕಡ್ಡಾಯ. ರೇಶನ್ ಕಾರ್ಡ್ ಇದ್ದವರು ಈಗಾಗಲೇ 2 ಕಂತಿನ ಹಣ ಪಡೆದಿದ್ದಾರೆ. ಇಲ್ಲದವರು ಆಹಾರ ಇಲಾಖೆಯ ವೆಬ್‌ಸೈಟ್ ಯಾವಾಗ ತೆರೆಯುತ್ತದೆ ಎಂದು ಕಾದು ಕುಳಿತಿದ್ದಾರೆ.
ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಯ ಖಾತೆಗೆ ಮಾಸಿಕ 2,000 ರೂ. ನೀಡಲಾಗುವುದು ಎಂದು ಕಾಂಗ್ರೆಸ್ ಚುನಾವಣೆಗೂ ಮುನ್ನ ೋಷಿಸಿತ್ತು. ಸರ್ಕಾರ ರಚನೆಯ ನಂತರ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆಗೆ ಬಿಪಿಎಲ್, ಅಂತ್ಯೋದಯ ಅಥವಾ ಎಪಿಎಲ್ ಕಾರ್ಡ್ ಹೊಂದಿರುವುದು ಕಡ್ಡಾಯ. ಯಾವಾಗ ಯೋಜನೆ ಅನುಷ್ಠಾನಗೊಂಡಿತೋ, ಆಗಿನಿಂದ ಆಹಾರ ಇಲಾಖೆ ಹೊಸ ಅರ್ಜಿ ಸ್ವೀಕೃತಿಯನ್ನು ಸ್ಥಗಿತಗೊಳಿಸಿದೆ. ಹೀಗಾಗಿ ರೇಶನ್ ಕಾರ್ಡ್ ಇಲ್ಲದವರು ಗೃಹಲಕ್ಷ್ಮೀಯಿಂದ ವಂಚಿತರಾಗಿದ್ದಾರೆ.
ಜಿಲ್ಲೆಯಲ್ಲಿ ಸದ್ಯ 29,809 ಅಂತ್ಯೋದಯ ಪಡಿತರ ಚೀಟಿ, 3,57,281 ಆದ್ಯತಾ ಪಡಿತರ ಚೀಟಿ ಹಾಗೂ 3,87,090 ಪಿಪಿಎಲ್ ಪಡಿತರ ಚೀಟಿಗಳು ಇವೆ. ಇವಲ್ಲದೆ, 13,316 ಕುಟುಂಬಗಳು ಅರ್ಜಿ ಸಲ್ಲಿಸಿದ್ದು, ಇಲಾಖೆಯ ಅನುಮೋದನೆ ಕಾರ್ಯ ಬಾಕಿ ಚಾಲ್ತಿಯಲ್ಲಿದೆ. ಈ ಪೈಕಿ ಹುಬ್ಬಳ್ಳಿ ನಗರದಲ್ಲಿ ಅತಿ ಹೆಚ್ಚು ಅಂದರೆ 4,756, ಅಳ್ನಾವರದಲ್ಲಿ ಅತಿ ಕಡಿಮೆ ಅಂದರೆ 168 ಅರ್ಜಿಗಳು ವಿಲೇವಾರಿಯಾಗಬೇಕಿದೆ.
ಸ್ವೀಕೃತ ಅರ್ಜಿಗಳನ್ನು ಆಹಾರ ಇಲಾಖೆ ಅಧಿಕಾರಿಗಳು ಹಂತಹಂತವಾಗಿ ಪರಿಶೀಲಿಸಿ ಅನುಮೋದನೆ ನೀಡುತ್ತಿದ್ದಾರೆ. ಈ ಹಿಂದೆ ಸರ್ಕಾರ ಅನರ್ಹರನ್ನು ಕಾರ್ಡ್‌ಗಳನ್ನು ಗುರುತಿಸಿ ರದ್ದುಪಡಿಸಲು ಇಲಾಖೆ ಅಧಿಕಾರಿಗಳಿಗೆ ಗಡುವು ನೀಡಿತ್ತು. ಹೀಗಾಗಿ ಹೊಸ ಅರ್ಜಿಗಳ ಸ್ವೀಕೃತಿ ಮತ್ತು ವಿಲೇವಾರಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ.

ಹೆಸರು ಡಿಲೀಟ್, ಸೇರ್ಪಡೆಗಿಲ್ಲ ಅವಕಾಶ
ಆಹಾರ ಇಲಾಖೆ ವೆಬ್‌ಸೈಟ್‌ನಲ್ಲಿ ಹೊಸ ಅರ್ಜಿ ಸಲ್ಲಿಕೆಗೆ ಆಗೊಮ್ಮೆ ಈಗೊಮ್ಮೆ ಅವಕಾಶ ನೀಡಲಾಗುತ್ತಿದೆ. ಕೆಲವೊಮ್ಮೆ ಒಂದು ದಿನದ ಮಟ್ಟಿಗೆ ಅರ್ಜಿ ಸಲ್ಲಿಕೆಗೆ ಅವಕಾಶವಿರುತ್ತದೆ. ಆದರೆ, ಬಹುತೇಕ ಸಮಯ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಅರ್ಜಿ ಸಲ್ಲಿಸಲಾಗದೆ, ಮತ್ತೊಂದು ಅವಧಿಗೆ ಕಾಯುವಂತಾಗಿದೆ. ಇನ್ನು ಕಾರ್ಡ್‌ಗಳಲ್ಲಿ ಹೆಸರು ಬಿಟ್ಟು ಹೋಗಿರುವ ಕುಟುಂಬ ಸದಸ್ಯರನ್ನು ಸೇರ್ಪಡೆಗೊಳಿಸುವುದು ಮತ್ತು ಮೃತರ ಹೆಸರುಗಳನ್ನು ತೆಗೆದು ಹಾಕಲೂ ಆಗುತ್ತಿಲ್ಲ.

ಹೊಸ ಪಡಿತರ ಚೀಟಿಗಾಗಿ ಅರ್ಜಿ ಸ್ವೀಕಾರ ಆರಂಭ ರಾಜ್ಯ ಮಟ್ಟದಲ್ಲಿ ಆಗಬೇಕು. ಜಿಲ್ಲೆಯಲ್ಲಿ ಈಗಾಗಲೇ ಸಲ್ಲಿಕೆಯಾದ ಅರ್ಜಿಗಳ ಹಂತಹಂತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಪಡಿತರ ಚೀಟಿ ಹೊಂದಿರುವ ಅನರ್ಹರು ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸರೆಂಡರ್ ಮಾಡಬೇಕು.
- ವಿನೋದಕುಮಾರ ಹೆಗ್ಗಳಕಿ, ಜಂಟಿ ನಿರ್ದೇಶಕ, ಆಹಾರ ಇಲಾಖೆ