ಕೂಲೂರು ಬಸ್‌ನಿಲ್ದಾಣದ ಬಳಿ ನಿರ್ವಹಣೆಯಿಲ್ಲದೆ ಪಾಳುಬಿದ್ದ ಸ್ಥಿತಿಯಲ್ಲಿರುವ ಸುಸಜ್ಜಿತ ನೀರಿನ ಘಟಕ. 
ಜಿಲ್ಲೆ

ನೀರಿನ ಘಟಕಕ್ಕಿಲ್ಲ ದುರಸ್ತಿ ಭಾಗ್ಯ, ಸುಸಜ್ಜಿತ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತ, ಕುಡಿಯುವ ನೀರಿಗಾಗಿ ಸಾರ್ವಜನಿಕರ ಪರದಾಟ

ಶ್ರವಣ್‌ಕುಮಾರ್ ನಾಳ, ಮಂಗಳೂರು

ಸುಸಜ್ಜಿತ ನೀರಿನ ಘಟಕ, ಆದರೆ ಸ್ಥಳೀಯಾಡಳಿತದಿಂದ ವಿದ್ಯುತ್ ಸಂಪರ್ಕ ಕಡಿತ. ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡ ಸಂಸ್ಥೆ ಪ್ರಚಾರಕ್ಕೆ ಮಾತ್ರ ಸೀಮಿತ... ಈಮಧ್ಯೆ ಸುಸಜ್ಜಿತ ನೀರಿನ ಘಟಕವಿದ್ದರೂ ಸಾರ್ವಜನಿಕರಿಗೆ ಕುಡಿಯಲು ನೀರಿಲ್ಲ...!

ಇದು ಕೂಲೂರು ಬಸ್‌ನಿಲ್ದಾಣದಲ್ಲಿರುವ ಸುಸಜ್ಜಿತ ನೀರಿನ ಘಟಕದ ಅವ್ಯವಸ್ಥೆ...

ಸಾರ್ವಜನಿಕರ ಕುಡಿಯುವ ನೀರಿನ ಉದ್ದೇಶಕ್ಕೆ ದೇಶದ ಪ್ರಮುಖ ಉದ್ಯಮ ಸಂಸ್ಥೆ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‌ಆರ್) ಅನುದಾನದಲ್ಲಿ ನೀಡಿದ ಉನ್ನತ ಗುಣಮಟ್ಟದ ಕುಡಿಯುವ ನೀರಿನ ಘಟಕಕ್ಕೆ ಮಂಗಳೂರು ಮಹಾನಗರ ಪಾಲಿಕೆಯು ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ಇದರಿಂದ ಕೂಳೂರು ಬಸ್ ನಿಲ್ದಾಣದಲ್ಲಿರುವ ಸುಸಜ್ಜಿತ ನೀರಿನ ಘಟಕ ನಿರ್ವಹಣೆಯಾಗದೆ ಕೆಟ್ಟು ಹೋಗಿದೆ. ಸುಸಜ್ಜಿತ ನೀರಿನ ಘಟಕ ನಿರ್ಮಾಣ ಸಂದರ್ಭದಲ್ಲಿ ಜೆಸಿಐ ಸುರತ್ಕಲ್ ಸಂಸ್ಥೆ ಇದರ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿರುವುದು ಮಾತ್ರವಲ್ಲದೆ ಇಲ್ಲಿ ಅಮೃತ ಶಿಲೆಯಲ್ಲಿ ತನ್ನ ಹೆಸರನ್ನೂ ಕೆತ್ತಿಸಿಕೊಂಡಿದೆ. ಆದರೆ ಈ ಘಟಕದ ನಿರ್ವಹಣೆ ಬಗ್ಗೆ ಒಂದು ದಿನವೂ ಗಮನ ಹರಿಸಿಲ್ಲ.

*ನೀರಿಗಾಗಿ ಸಾರ್ವಜನಿಕರ ಪರದಾಟ

ಪ್ರತೀ ದಿನ ಕೂಳೂರು ಬಸ್‌ನಿಲ್ದಾಣ ಸುತ್ತಮುತ್ತ ಸಾವಿರಾರು ಜನ ಓಡಾಡುತ್ತಿದ್ದು, ಇವರಿಗೆ ಉಪಯೋಕ್ಕಾಗಿ ಕೆಐಓಸಿಎಲ್ ಸಂಸ್ಥೆ ಮಾನವೀಯ ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿತ್ತು. ಈಮಧ್ಯೆ ಇದರ ನಿರ್ವಹಣೆ ಮಾಡುತ್ತೇನೆ ಎಂದು ಮುಂದೆ ಬಂದು ಪ್ರಚಾರ ಪಡೆದುಕೊಂಡಿದ್ದ ಸಂಸ್ಥೆ ಕೈಕೊಟ್ಟಿದೆ. ವಿದ್ಯುತ್ ಬಿಲ್ ಕಟ್ಟದ ಹಿನ್ನೆಲೆಯಲ್ಲಿ ಪಾಲಿಕೆಯ ಗಮನಕ್ಕೆ ತಂದು ಮೆಸ್ಕಾಂ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಿದೆ. ಪ್ರಸ್ತುತ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ಇದರ ನಿರ್ವಹಣೆಯನ್ನು ತಾನೇ ವಹಿಸಿಕೊಳ್ಳಲು ಸಿದ್ದವಾಗಿದ್ದರೂ ಪಾಲಿಕೆಯಿಂದ ಸಮರ್ಪಕ ಸ್ಪಂದನೆ ಸಿಗುತ್ತಿಲ್ಲ. ಒಟ್ಟಿನಲ್ಲಿ ಸುಸಜ್ಜಿತ ನೀರಿನ ಘಟಕಕ್ಕೆ ದುರಸ್ತಿ ಭಾಗ್ಯಕಾಣದೆ ಸಾರ್ವಜನಿಕರರು ಕುಡಿಯುವ ನೀಡಿಗಾಗಿ ಪರದಾಡುವಂತಾಗಿದೆ.

---------------

ವಿದ್ಯುತ್ ಬಿಲ್ ಬಾಕಿ

ಸಮಾಣ್ಯವಾಗಿ ಕೂಳೂರು ಸುತ್ತಮುತ್ತ ಕಾರ್ಮಿಕ ವರ್ಗದವರ ಸಂಚಾರ ಹೆಚ್ಚಾಗಿರುವ ಪ್ರದೇಶ. ಈ ಹಿನ್ನೆಲೆಯಲ್ಲಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ಸುಸಜ್ಜಿತವಾದ ಕುಡಿಯುವ ನೀರಿನ ಘಟಕ ನಿರ್ಮಿಸಿತ್ತು. ಜೆಸಿಐ ಸುರತ್ಕಲ್ ಸಂಸ್ಥೆ ಇದರ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿತ್ತು. ನಂತರದ ದಿನದಲ್ಲಿ ಜೆಸಿಐ ವಿದ್ಯುತ್ ಬಿಲ್ ಬಾಕಿಯಿರಿಸಿದ್ದು ಮಾತ್ರವಲ್ಲದೆ ನಿರ್ವಹಣೆಯನ್ನೂ ಮಾಡಿಲ್ಲ. ಪ್ರಚಾರಕ್ಕಾಗಿ ತನ್ನ ಹೆಸರನ್ನು ಇಲ್ಲಿ ಮುದ್ರಿಸಿ ನಂತರ ಈ ಘಟಕವನ್ನು ನಿರ್ವಹಣೆ ಮಾಡಿದೆ ಸುಮ್ಮನಾಗಿದೆ ಎಂಬುವುದು ಸಾರ್ವಜನಿಕರ ಆರೋಪ.

---------------

ಕೆಐಓಸಿಎಲ್ ಸಂಸ್ಥೆ ಸುಸಜ್ಜಿತವಾದ ನೀರಿನ ಘಟಕ ಮಾಡಿಕೊಟ್ಟಿದ್ದಾರೆ, ಆದರೆ ಇದನ್ನು ನಿರ್ವಹಣೆ ಮಾಡಬೇಕಾದ ಸಂಸ್ಥೆ ನಿರ್ವಹಣೆ ಮಾಡದೆ ವಿದ್ಯುತ್ ಬಿಲ್ ಬಾಕಿಯಿರಿಸಿದ್ದರಿಂದ ಮೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ಪಾಲಿಕೆ ವತಿಯಿಂದ ಇದರ ನಿರ್ವಹಣೆ ಮಾಡಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮಾಹಿತಿ ನೀಡಲಾಗುವುದು.

ಸುಧೀರ್ ಶೆಟ್ಟಿಕಣ್ಣೂರು, ಮೇಯರ್

ಮಂಗಳೂರು ಮಹಾನಗರ ಪಾಲಿಕೆ

----------------

ಕೂಳೂರು ಸುತ್ತಮುತ್ತಲಿನ ನಾಗರೀಕರಿಗೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಯ ದೃಷ್ಠಿಯಿಂದ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್‌ನಿಂದ ಕೂಳೂರು ಬಸ್‌ನಿಲ್ದಾಣದ ಬಳಿ ಸುಸಜ್ಜಿತ ನೀರಿನ ಘಟಕ ಸ್ಥಾಪಿಸಿದೆ. ಸಧ್ಯಕ್ಕೆ ನಿರ್ವಹಣೆಯಾಗದೆ ಹಾಗೆಯೇ ಇದೆ. ಕೆಐಓಸಿಎಲ್‌ನಿಂದ ಇದನ್ನು ನಿರ್ವಹಣೆ ಮಾಡಲು ನಾವು ಸಿದ್ದ, ಆದರೆ ಸ್ಥಳೀಯಾಡಳಿತದ ಸಹಕಾರ ಅಗತ್ಯ.

ಚೇತನ್ ಕುಮಾರ್ ಶೆಟ್ಟಿ, ಸೀನಿಯರ್ ಮೆನೆಜರ್

(ಎಚ್‌ಆರ್ ಮತ್ತು ಎ) ಕೆಐಓಸಿಎಲ್- ಮಂಗಳೂರು