ಶಿವಮೊಗ್ಗ: ಶಿಕ್ಷಣಕ್ಕೆ ಜಾತಿ-ಮತ-ಧರ್ಮಗಳಿಲ್ಲ. ಶಿಕ್ಷಣದಿಂದ ಮಾತ್ರ ನಂಬಿದ ದೇವರನ್ನು ಕಾಣಲು ಸಾಧ್ಯ. ಶಿಕ್ಷಣವಿಲ್ಲದಿದ್ದರೆ ಯಾವುದೇ ಧರ್ಮ ನಿರರ್ಥಕ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಗೋಪಾಳದ ಎಸ್‌ಕೆಪಿ ಶಿವಮೊಗ್ಗ ಪಬ್ಲಿಕ್ ಸ್ಕೂಲಿನ ವಿಶೇಷ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಶಾಲೆಗಳು ಅಭಿವೃದ್ಧಿಯ ಹಾದಿಯಲ್ಲಿರಬೇಕು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಧರ್ಮಗಳನ್ನು ಮೀರಿ ಶಿಕ್ಷಣಕ್ಕೆ ಒತ್ತು ಕೊಟ್ಟು ಅಭಿವೃದ್ಧಿ ಪಥದಲ್ಲಿ ಎಲ್ಲರನ್ನೂ ಸಾಗಿಸುತ್ತಿದ್ದರು. ಶಿಕ್ಷಣದ ಮೂಲಕವಷ್ಟೇ ಮಕ್ಕಳನ್ನು ಉದ್ಧರಿಸಲು ಸಾಧ್ಯ. ಅವರ ಉದ್ಧಾರದಿಂದ ದೇಶ ಮತ್ತು ಧರ್ಮ ಉದ್ಧಾರವಾಗುತ್ತದೆ ಎಂದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಮುಸ್ಲಿಂ ಸಮುದಾಯದ ಮಕ್ಕಳು ದಾರಿ ತಪ್ಪದಂತೆ ಇರಲು ಶಾಲೆಗಳು ಕಾರಣವಾಗಬೇಕು. ಇಲ್ಲಿ ಅಬ್ದುಲ್ ಕಲಾಂನಂತಹ ಮೇರು ಪ್ರತಿಭೆಗಳು ಕೂಡ ಇರುತ್ತಾರೆ. ಅವರಿಗೆ ಇಂತಹ ಶಾಲೆಗಳ ಮೂಲಕ ಪ್ರೋತ್ಸಾಹ ಸಿಗಬೇಕು ಎಂದು ತಿಳಿಸಿದರು.
ಶಾಲೆಯ ಚೇರ್ಮನ್ ಜನಾಬ್ ಮೊಹಮದ್ ಅನ್ವರ್ ಖಾದ್ರಿ ಮಾತನಾಡಿ, ಸರ್ವ ಧರ್ಮಗಳ ಮಕ್ಕಳಿಗೂ ಈ ಶಾಲೆ ಭವಿಷ್ಯ ರೂಪಿಸಲು ಸನ್ನದ್ಧವಾಗಿದೆ. ಇಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಂದ ಹಿಡಿದು, ಪ್ರತಿಯೊಬ್ಬರನ್ನೂ ಈ ದೇಶ ಮತ್ತು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಕೆಲಸ ಮಾಡಲಿದ್ದೇವೆ. ಯಾವುದೇ ಶಾಲೆ ನೀಡದ ಸೌಲಭ್ಯಗಳನ್ನೆಲ್ಲ ಇಲ್ಲಿ ನೀಡಲಾಗುತ್ತಿದೆ ಎಂದರು.
ಪ್ರಾಚಾರ್ಯ ಸೈಯದ್ ಅಖ್ತರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಶಾಸಕ ಎಸ್.ಎನ್.ಚನ್ನಬಸಪ್ಪ, ಸಂಸ್ಥೆಯ ಟ್ರಸ್ಟಿಗಳಾದ ಸಿ.ಎಚ್.ಮೊಹಮದ್ ರಿಯಾಜ್ ಖಾದ್ರಿ, ಶೇಖ್ ಮೊಹಮದ್ ಜಲಾಲ್ ಖಾದ್ರಿ, ಮೊಹಮದ್ ಶಫೀವುಲ್ಲಾ, ಬಸವರಾಜ್ ಮಲ್ಲಪ್ಪ, ಮಧುಕುಮಾರಿ ಉಪಸ್ಥಿತರಿದ್ದರು.