ಜಿಲ್ಲೆ

ಅಧಿಕಾರಕ್ಕಾಗಿ ಪಾಕ್ಷಾಂತರ ಮಾಡುವವರಿಗೆ ಬೇಡ ಮನ್ನಣೆ

ಕೋಲಾರ ಡೆಸ್ಕ್

 ಕೋಲಾರ: ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವವರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್​ಗೆ ಮರು ಸೇರ್ಪಡೆ ಮಾಡಿಕೊಳ್ಳದಂತೆ ಪಕ್ಷದ ಹೈಕಮಾಂಡ್​, ಶಾಸಕರ ಮೇಲೆ ಒತ್ತಾಯ ಹೇರಲು ಕಾರ್ಯಕರ್ತರು ನಿರ್ಧರಿಸಿದರು.

ತಾಲೂಕಿನ ಹೊಲ್ಲಂಬಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹುತ್ತೂರು ಹೋಬಳಿಮಟ್ಟದ ಕಾಂಗ್ರೆಸ್​ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಕೋಮುಲ್​ ನಿರ್ದೇಶಕ ವಡಗೂರು ಹರೀಶ್​ ಕಾಂಗ್ರೆಸ್​ನಿಂದ ಅಧಿಕಾರ ಪಡೆದು ಬಳಿಕ ಜೆಡಿಎಸ್​ ಸೇರಿ, ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹಾಗೂ ಹೋಬಳಿ ವ್ಯಾಪ್ತಿಯ ನಿಷ್ಠಾವಂತ ಕಾಂಗ್ರೆಸ್​ ಮುಖಂಡರ ಮೇಲೆ ಆರೋಪ ಮಾಡಿದ್ದು, ಅವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬಾರದು ಎಂದು ತೀಮಾರ್ನಿಸಲಾಯಿತು.

ಬಂಗಾರಪೇಟೆ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ ಮಾತನಾಡಿ, ವಡಗೂರು ಹರೀಶ್​ ಅವರು ಕಾಂಗ್ರೆಸ್​ ಕಾರ್ಯಕರ್ತರು, ಮುಖಂಡರಿಗೆ ಕೊಟ್ಟಿರುವ ನೋವನ್ನು ಯಾರು ಮರೆತಿಲ್ಲ. ಪಕ್ಷ ಬಿಟ್ಟು ಹೋದವರನ್ನು ಕರೆ ತಂದು ಮತ್ತೆ ಅಧಿಕಾರ ಕೊಡುವುದಕ್ಕೆ ನಮ್ಮೆಲ್ಲರ ವಿರೋಧವಿದೆ ಎಂದರು.

ಹಿರಿಯ ಕಾಂಗ್ರೆಸ್​ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ ಮಾತನಾಡಿ, ಹುತ್ತೂರು ಹೋಬಳಿ ಈಗಾಗಲೇ ಕಂದಾಯ ವ್ಯಾಪ್ತಿ ಕೋಲಾರ ತಾಲೂಕಿಗೆ ಒಳಗೊಂಡಿದೆ. ಕೋಮುಲ್​ ಕ್ಷೇತ್ರ ವಿಂಗಡಣೆಯಲ್ಲಿ ಯಾವುದೇ ಕಾರಣಕ್ಕೂ ಬಂಗಾರಪೇಟೆ ಕ್ಷೇತ್ರಕ್ಕೆ ಸೇರ್ಪಡೆ ಮಾಡಬಾರದು ಎಂದರು.

ಮುಖಂಡರಾದ ನಡುಪಳ್ಳಿ ಸಂತೋಷ್​, ಯಾರಂಘಟ್ಟ ಮುನಿರಾಜು, ಸತೀಶ್​, ರಮೇಶ್​, ತಾತಪ್ಪ ಕೋದಂಡಪ್ಪ, ಹಳೆಸೋಮರಸನಹಳ್ಳಿ ಮಂಜುನಾಥ್​, ಗಿರೀಶ್​, ಅಜ್ಜಪ್ಪನಹಳ್ಳಿ ಸುರೇಶ್​, ಕೆಂಬೋಡಿ ಗಿರೀಶ್​ ಇದ್ದರು.