ಬಳ್ಳಾರಿ: ಮೇಕೆದಾಟು ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಾನುವಾರ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, "ತಮಿಳುನಾಡಿಗೆ ಈ ವಿಚಾರದಲ್ಲಿ ಅಡ್ಡಿಪಡಿಸಲು ಅಥವಾ ಕಾನೂನು ರಚನೆ ಮಾಡಲು ಹಕ್ಕಿಲ್ಲ. ಸರ್ಕಾರದ ನಿಲುವು ಸ್ಪಷ್ಟವಾಗಿದ್ದು, ಯೋಜನೆಯಿಂದ ಹಿಂದೆ ಸರಿಯೋದಿಲ್ಲ" ಎಂದರು.
ತುಂಗಭದ್ರಾ ಜಲಾಶಯ ಹೂಳು ತೆಗೆಯುವುದರ ಪರ್ಯಾಯವಾಗಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಡಿಪಿಆರ್ ತಯಾರಿಸಲು 20 ಕೋಟಿ ರೂ. ಮಂಜೂರು ಸಹ ಮಾಡಲಾಗಿದೆ. ತುಂಗಭದ್ರಾ ನೀರು ನದಿ ಮೂಲಕ ಹರಿದು ಹೋಗೋದನ್ನು ತಡೆದು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ ಎಂದರು.
ಗೆದ್ದೇ ಗೆಲ್ಲುತ್ತೇವೆ: ಎರಡು ಉಪಚುನಾವಣೆ ನಮಗೆ ಸವಾಲಾಗಿದೆ. ಆದರೆ, ಬರೆದಿಟ್ಟುಕೊಳ್ಳಿ ಎರಡರಲ್ಲೂ ಗೆದ್ದೇ ಗೆಲ್ಲುತ್ತೇವೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕೋರ್ ಕಮೀಟಿಯಲ್ಲಿ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿ ಹೈಕಮ್ಯಾಂಡ್ಗೆ ಕಳುಹಿಸುತ್ತೇವೆ. ಈ ಚುನಾವಣೆ ಸೆಮಿಫೈನಲ್ ಅಲ್ಲ. ಯಾಕೆಂದರೆ ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ, ನಂತರ ಅಧಿಕಾರ ಕಳೆದುಕೊಂಡಿತ್ತು ಎಂದು ಬೊಮ್ಮಾಯಿ ಹೇಳಿದರು.
ಬಳ್ಳಾರಿ ಕಾರ್ಖಾನೆ ಹೆಸರಲ್ಲಿ ಲ್ಯಾಂಡ್ ಬ್ಯಾಂಕ್ ಮಾಡಲಾಗಿದೆ. ಆ ಭೂಮಿ ಸದ್ಬಳಕೆ ಮಾಡಿಕೊಳ್ಳುತ್ತೇವೆ. ನವೆಂಬರ್ ನಲ್ಲಿ ಬಳ್ಳಾರಿ ಪ್ರವಾಸ ಮಾಡಿ ಇಲ್ಲಿನ ಸಮಸ್ಯೆಗಳನ್ನು ಸಂಪೂರ್ಣ ಬಗೆಹರಿಸುವೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.