ಗುತ್ತಲ: ನದಿ ಪಕ್ಕದಲ್ಲಿಯೇ ಇದ್ದರೂ ಕಳೆದ ಎರಡು ವರ್ಷಗಳಿಂದ ಕುಡಿಯಲು ಶುದ್ಧ ನೀರು ಸಿಗದೆ ಗುತ್ತಲ ಹೋಬಳಿಯ ಹೊಸರಿತ್ತಿ ಗ್ರಾ.ಪಂ. ವ್ಯಾಪ್ತಿಯ ಅಕ್ಕೂರಿನ ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ.
ಗ್ರಾಪಂನಿಂದ ನಿರ್ವಿುಸಲಾದ ಶುದ್ಧ ಕುಡಿಯುವ ನೀರಿನ ಘಟಕ ಎರಡು ವರ್ಷಗಳಿಂದ ಸ್ಥಗಿತವಾಗಿದೆ. ಗ್ರಾಮದಲ್ಲಿರುವ 5 ಕೊಳವೆಬಾವಿಗಳಲ್ಲಿ 4 ಕಾರ್ಯ ನಿರ್ವಹಿಸುತ್ತಿವೆ. ಆದರೆ, ಇವುಗಳ ನೀರು ಕುಡಿಯಲು ಯೋಗ್ಯವಿಲ್ಲ ಎಂಬ ಕಾರಣಕ್ಕೆ ಜನರು ನದಿ ನೀರನ್ನೇ ಅವಲಂಬಿಸಿದ್ದಾರೆ.
ಮಳೆಗಾಲದಲ್ಲಿ ಗ್ರಾಮಸ್ಥರಿಗೆ ಕಲುಷಿತ ನೀರೇ ಗತಿ. ಕಲುಷಿತ ನೀರು ಸೇವನೆಯಿಂದ ಒಂದಿಲ್ಲೊಂದು ಕಾಯಿಲೆಗೆ ತುತ್ತಾಗುತ್ತಿರುವುದು ಗ್ರಾಮದಲ್ಲಿ ಸಾಮಾನ್ಯವಾಗಿದೆ. ಅನೇಕರಿಗೆ ಚರ್ಮ ಸಂಬಂಧಿ ಕಾಯಿಲೆಗಳೂ ಕಾಣಿಸಿಕೊಂಡಿವೆ. ಕೆಲವರು ನದಿ ನೀರು ತರಲು ಭಯ ಪಡುತ್ತಿದ್ದಾರೆ. ಇನ್ನೂ ಕೆಲವರು ನದಿಯ ನೀರನ್ನು ಕಾಯಿಸಿ ಕುಡಿಯುತ್ತಿದ್ದಾರೆ.
ಗ್ರಾಮದ ಬಹುತೇಕ ಜನರು ಕೃಷಿಕರು ಹಾಗೂ ಕೃಷಿ ಕಾರ್ವಿುಕರಾಗಿದ್ದು, ಪಕ್ಕದ ಹೊಸರಿತ್ತಿಗೆ ತೆರಳಿ ಶುದ್ಧ ಕುಡಿಯುವ ನೀರನ್ನು ತರುವುದು ವೆಚ್ಚದಾಯಕ ಹಾಗೂ ಶ್ರಮದಾಯಕ ಕಾರ್ಯವಾಗಿದೆ.
2019ರ ಆಗಸ್ಟ್ನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿದೆ. ಇದನ್ನು ದುರಸ್ತಿ ಮಾಡಿದರೂ ಟಿಡಿಎಸ್ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಪುನಃ ಸ್ಥಗಿತಗೊಂಡಿದೆ. ಈ ಘಟಕದ ನಿರ್ವಹಣೆಯ ಗುತ್ತಿಗೆ ಪಡೆದವರ ನಿರ್ಲಕ್ಷ್ಯದಿಂದಾಗಿ ನಮಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.| ಹರೀಶ ಮಾಗಡಿಮಠ, ಗ್ರಾ.ಪಂ. ಸದಸ್ಯ ಅಕ್ಕೂರನೀರು ಗಡುಸಾಗಿದೆ ಎಂದು ಜನರು ಬಳಸುತ್ತಿಲ್ಲ ಎಂದು ಅಧಿಕಾರಿಗಳ ಹೇಳಿದ್ದಾರೆ. ಘಟಕ ಸರಿಪಡಿಸಿ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು.| ಡಾ. ಬಿ. ಬಸವರಾಜಪ್ಪ, ಹಾವೇರಿ ತಾ.ಪಂ ಇಒ