ಜಿಲ್ಲೆ

ಗುಣಮಟ್ಟವಿಲ್ಲದ ರಾಗಿ ಖರೀದಿ ಇಲ್ಲ

ಕೋಲಾರ ಡೆಸ್ಕ್

ಬೂದಿಕೋಟೆ: ರಾಗಿ ಖರೀದಿ ಕೇಂದ್ರದಲ್ಲಿ ಕಳಪೆ ರಾಗಿ ಮಾರಾಟ ಹಾಗೂ ದಲ್ಲಾಳಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಗುಣಮಟ್ಟವಿಲ್ಲದ ರಾಗಿ ಮಾರಾಟಕ್ಕೆ ಬ್ರೇಕ್​ ಹಾಕಲಾಗಿದೆ.

ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಈ ವರ್ಷ ನಿಗದಿತ ಸಮಯಕ್ಕಿಂತ ಸುಮಾರು ಎರಡು ತಿಂಗಳು ತಡವಾಗಿ ರಾಗಿ ಖರೀದಿ ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ಬೆಂಬಲ ಬೆಲೆಯೂ ಹೆಚ್ಚಾಗುತ್ತಿದ್ದು, ಈ ವರ್ಷ ಕ್ವಿಟಾಂಲ್​ ರಾಗಿಗೆಗೆ 4,290 ರೂ. ನಿಗದಿಪಡಿಸಲಾಗಿದೆ.

ಈ ಹಿಂದೆ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದರ ಜತೆಗೆ ಕಳಪೆ ರಾಗಿ ಪೂರೈಕೆ ಮಾಡುತ್ತಿದ್ದ ಆರೋಪವಿತ್ತು. ಈ ಬಗ್ಗೆ "ವಿಜಯವಾಣಿ'ಯಲ್ಲಿ ವಿಸತ ವರದಿ ಪ್ರಕಟ ಮಾಡಲಾಗಿತ್ತು. ಇದರ ಬೆನ್ನಲ್ಲೆ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಹಲವು ಷರತ್ತು ವಿಧಿಸಿದ್ದು, ಶೇ.8 ರಿಂದ 12 ತೇವಾಂಶ ಇರುವ ರಾಗಿ ಪೂರೈಸಲು, ನೋಂದಣಿ ಮತ್ತು ಬಿಲ್​ ಪಡೆಯುವಾಗ ಪತ್ಯೇಕ ಬಯೋ ಮೆಟ್ರಿಕ್​ ಕಡ್ಡಾಯಗೊಳಿಸಿದ್ದು, ಇದರಿಂದ ದಲ್ಲಾಳಿಗಳ ಹಾವಳಿ ನಿಯಂತ್ರಿಸುವುದರ ಜತೆಗೆ ಗುಣಮಟ್ಟವಲ್ಲದ ರಾಗಿ ಮಾರಾಟಕ್ಕೂ ಕಡಿವಾಣ ಹಾಕಲಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ 692 ರೈತರು 10,456 ಕ್ವಿಂಟಾಲ್​ ರಾಗಿ ಮಾರಾಟ ಮಾಡಿದ್ದಾರೆ. ಪಡಿತರ ವಿತರಣೆಗೆ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳಿಗೆ ಪೂರೈಸಲು ಹಾಗೂ ರಾಗಿ ಖರೀದಿ ಒಂದೇ ಸ್ಥಳದಲ್ಲಿ ನಡೆಯುತ್ತಿರುವುದರಿಂದ ರಾಗಿ ಖರೀದಿಗೆ ಸಮಸ್ಯೆ ಎದುರಾಗಿದೆ. ಆದ್ದರಿಂದ ಒಂದು ದಿನಕ್ಕೆ ಇಷ್ಟೇ ರೈತರಿಂದ ರಾಗಿ ಖರೀದಿಸಲಾಗುತ್ತದೆ ಎಂದು ತಾತ್ಕಾಲಿಕ ನಿಯಮ ಮಾಡಿಕೊಂಡಿರುವುದರಿಂದ ಹಲವು ರೈತರು ಕಾದು ಕೂರುವಂತಾಗಿದೆ.

6,461 ರೈತರು ನೋಂದಣಿ

ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದ ಕಾರಣ ರಾಗಿ ಇಳುವರಿ ಕುಂಠಿತಗೊಂಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ನೋಂದಣಿ ಕುಸಿದಿದೆ. ಜಿಲ್ಲೆಯಲ್ಲಿ 6,461 ರೈತರು 97,400 ಕ್ವಿಂಟಾಲ್​ ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.

8ರಿಂದ 12 ತೇವಾಂಶವೇ ಏಕೆ?

ಶೇ.8ಕ್ಕಿಂತ ಕಡಿಮೆ ತೇವಾಂಶದ ರಾಗಿಯಲ್ಲಿ ಪೋಷಕಾಂಶ ಕಡಿಮೆ ಇರುವ ಕಾರಣ ಮತ್ತು ಶೇ.12ಕ್ಕಿಂತ ಹೆಚ್ಚು ತೇವಾಂಶ ಇದ್ದರೆ ರಾಗಿಯನ್ನು ಹಲವು ದಿನಗಳ ಕಾಲ ದಾಸ್ತಾನು ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ತೇವಾಂಶದ ಜತೆಗೆ ಕಪು$್ಪ ಹಾಗೂ ಕಳಪೆ ರಾಗಿ ತಂದವರನ್ನು ಅಧಿಕಾರಿಗಳು ವಾಪಸ್ಸು ಕಳುಹಿಸುತ್ತಿದ್ದಾರೆ.

ತಾಲೂಕುವಾರು ಅಂಕಿ ಅಂಶ

ಮಾಲೂರು ತಾಲೂಕಿನಲ್ಲಿ 2,411 ರೈತರು ನೊಂದಾಯಿಸಿದ್ದು, 316 ರೈತರು 5054 ಕ್ವಿಂಟಾಲ್​ ಮಾರಾಟ ಮಾಡಿದ್ದಾರೆ. ಬಂಗಾರಪೇಟೆ 1,696 ರೈತರು ನೋಂದಾಯಿಸಿದ್ದು, ಈ ಪೈಕಿ 193 ರೈತರು 2,728 ಕ್ವಿಂಟಾಲ್​ ಮಾರಾಟ, ಕೋಲಾರ 1,500 ರೈತರು ನೋಂದಣಿ ಮಾಡಿದ್ದು, 79 ರೈತರು 1,233 ಕ್ವಿಂಟಾಲ್​ ಮಾರಾಟ, ಮುಳಬಾಗಿಲು 314 ರೈತರು ನೋಂದಾಯಿಸಿದ್ದು, 45 ರೈತರು 610 ಕ್ವಿಂಟಾಲ್​ ಮಾರಾಟ ಮಾಡಿದ್ದಾರೆ. ಶ್ರೀನಿವಾಸಪುರ 428 ರೈತರು ನೋಂದಣಿ 52 ರೈತರು 779 ಕ್ವಿಂಟಾಲ್​ ಮಾರಾಟ, ಕೆಜಿಎಫ್​ 112 ರೈತರು ನೋಂದಾಯಿಸಿದ್ದು, 7 ರೈತರು 69 ಕ್ವಿಂಟಾಲ್​ ರಾಗಿ ಮಾರಾಟ ಮಾಡಿದ್ದಾರೆ.

ಸರ್ಕಾರ ದಲ್ಲಾಳಿಗಳಿಗೆ ಕಡಿವಾಣ ಹಾಕಲು ಮತ್ತು ಗುಣಮಟ್ಟದ ರಾಗಿ ಪಡೆಯಲು ಕೆಲವು ಷರತ್ತುಗಳನ್ನು ಹಾಕಿರುವುದು ಸ್ವಾಗತಾರ್ಹ. ಆದರೆ, ಪಹಣಿಯಲ್ಲಿ ವಯಸ್ಸಾದವರು ಮತ್ತು ಆನಾರೋಗ್ಯಕ್ಕೆ ತುತ್ತಾದವರು ಇರುವ ಕಾರಣ ಎರಡು ಬಾರಿ ಬಯೋಮೆಟ್ರಿಕ್​ ನೀಡಲು ಸಮಸ್ಯೆ ಎದುರಾಗುತ್ತಿದೆ. ಇದರ ಬಗ್ಗೆ ಸರ್ಕಾರ ಮತ್ತೊಮ್ಮೆ ಪರಿಶೀಲನೆ ಮಾಡಬೇಕು.

- ಸೋಮಶೇಖರ್​, ರೈತ

ಖರೀದಿ ಕೇಂದ್ರಗಳಲ್ಲಿ ಈ ಹಿಂದೆ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಗುಣಮಟ್ಟವಲ್ಲದ ರಾಗಿ ತಂದು ರೈತರು ಅಧಿಕಾರಿಗಳೊಂದಿಗೆ ಗಲಾಟೆ ಮಾಡುತ್ತಿದ್ದರು. ಈಗ ಸರ್ಕಾರ ಕೆಲವು ನಿಯಮ ಜಾರಿಗೆ ತಂದಿರುವುದರಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲ ಹಾಗೂ ದಲ್ಲಾಳಿಗಳಿಗೂ ಕಡಿವಾಣ ಹಾಕಿದಂತಾಗಿದೆ.

- ಜಿ.ಮನೋಹರನ್​, ವ್ಯವಸ್ಥಾಪಕ ಕೆಎಫ್​ಸಿಎಸ್​ಸಿ ಬಂಗಾರಪೇಟೆ