ಜಿಲ್ಲೆ

ಜೆಡಿಎಸ್ ವಿಲೀನದ ಪ್ರಸ್ತಾವ ಬಿಜೆಪಿ ಮುಂದಿಲ್ಲ: ಸಿ.ಟಿ.ರವಿ

madikerimailmanju

ಚಿಕ್ಕಮಗಳೂರು: ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನ ಅಥವಾ ಹೊಂದಾಣಿಕೆಗೊಳ್ಳುತ್ತದೆ ಎನ್ನುವ ಯಾವುದೇ ಪ್ರಸ್ತಾವ ನಮ್ಮ ಪಕ್ಷದ ಮುಂದೆ ಬಂದಿಲ್ಲ. ಈ ಚರ್ಚೆ ಹೇಗೆ ಪ್ರಾರಂಭವಾಯಿತು ಎನ್ನುವುದೇ ನಮಗೆ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ರೀತಿಯ ಚರ್ಚೆ ಮಾಡುವುದರಿಂದ ಹಿರಿಯರಾದ ಎಚ್.ಡಿ.ದೇವೇಗೌಡರ ಮನಸ್ಸಿಗೆ ಘಾಸಿಯಾಗುತ್ತದೆ. ಹೀಗಾಗಿ ಅನಗತ್ಯ ಚರ್ಚೆ ಬೇಡ. ವಿಲೀನ ಅಥವಾ ಹೊಂದಾಣಿಕೆ ಅವಶ್ಯಕತೆ ಈಗಿಲ್ಲ. ಅವರದ್ದು ಸ್ವತಂತ್ರ ಪಕ್ಷ. ಅವರು ಪಕ್ಷ ಕಟ್ಟಲು ಸಮರ್ಥರಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.

ಎಲ್ಲ ರಾಜಕೀಯ ಪಕ್ಷಗಳು ವೈಚಾರಿಕ ಭಿನ್ನತೆ ಪ್ರಶ್ನೆ ಬಂದಾಗ ಎದುರುಬದುರಾಗಿ ನಿಲ್ಲುವುದು ಧರ್ಮ. ದೇಶದ ವಿಷಯಾಧಾರಿತ ಪ್ರಶ್ನೆ ಬಂದಾಗ ಒಗ್ಗೂಡಿ ನಿಲ್ಲಬೇಕು. ಅದನ್ನು ಎಲ್ಲ ಪಕ್ಷಗಳು ಪಾಲಿಸಬೇಕು. ಅದು ಬಿಟ್ಟರೆ ವಿಲೀನದ ಅವಶ್ಯಕತೆ ಅವರಿಗೂ ಇಲ್ಲ. ನಮಗೂ ಇಲ್ಲ. ಸಮುದಾಯದ ಹಿತ ಮತ್ತು ದೇಶಹಿತದ ಪ್ರಶ್ನೆ ಬಂದಾಗ ಜೆಡಿಎಸ್ ನಮ್ಮ ಜತೆ ನಿಲ್ಲಲಿ. ನಾವು ಅದರ ಜತೆಗಿರುತ್ತೇವೆ. ಅದನ್ನೇ ನಿರೀಕ್ಷೆ ಮಾಡುತ್ತೇವೆ. ಆದರೆ ಕೆಲವು ಪಕ್ಷಗಳು ದೇಶದ ಪ್ರಶ್ನೆ ಬಂದಾಗಲೂ ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತವೆ, ಇದು ಅಪಾಯಕಾರಿ ಎಂದರು.