ಬೆಂಗಳೂರು: ಪದವಿ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಉಚಿತ ಲ್ಯಾಪ್ಟಾಪ್ ಗುಣಮಟ್ಟದ್ದಾಗಿದ್ದು, ಯಾವುದೇ ನ್ಯೂನತೆಯಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದರು. ಪದವಿ ವಿದ್ಯಾರ್ಥಿಗಳಿಗೆ ನೀಡಲಾಗುವ ಲ್ಯಾಪ್ಟಾಪ್ನಲ್ಲಿ ಹಲವು ನ್ಯೂನತೆಗಳಿವೆ ಎಂದು ಜೆಡಿಎಸ್ನ ಎಸ್.ಎಲ್.ಭೋಜೆಗೌಡ ಶೂನ್ಯವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಡಿಸಿಎಂ ಉತ್ತರ ನೀಡಿದರು.
2019-20ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲು 1,09,916 ಲ್ಯಾಪ್ಟಾಪ್ ಖರೀದಿಸಲಾಗಿದ್ದು, ಟೆಂಡರ್ ಮೂಲಕ ಗುತ್ತಿಗೆದಾರರನ್ನು ಗುರುತಿಸಿ ಕಾರ್ಯಾದೇಶ ನೀಡಲಾಗಿದೆ. ಲ್ಯಾಪ್ಟಾಪ್ಗಳು ಉನ್ನತ ಶಿಕ್ಷಣ ಇಲಾಖಾ ತಾಂತ್ರಿಕ ಸಲಹಾ ಸಮಿತಿಯಲ್ಲಿ ಅನುಮೋದಿಸಿದ ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಶೇ.10 ಲ್ಯಾಪ್ಟಾಪ್ಗಳನ್ನು ಕಿಯೋನಿಕ್ಸ್ ಸಂಸ್ಥೆ ಮೂಲಕ ತಪಾಸಣೆ ಮಾಡಲಾಗಿದೆ. ಆ ಕುರಿತಂತೆ ಕಿಯೋನಿಕ್ಸ್ ವರದಿ ನೀಡಿದ್ದು, ಲ್ಯಾಪ್ಟಾಪ್ಗಳು ಗುಣಮಟ್ಟದಿಂದ ಕೂಡಿವೆ ಎಂಬುದನ್ನು ತಿಳಿಸಿದೆ ಎಂದರು.
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
ಶಾಲಾ-ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂಬ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆರ್ಥಿಕ ಇಲಾಖೆ ಜತೆ ರ್ಚಚಿಸಿ, ಹಿರಿಯರ ಸಲಹೆ ಪಡೆದು ಪರಿಶೀಲಿಸುವುದಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಶ್ವಾಸನೆ ನೀಡಿದರು. ವಿಧಾನ ಪರಿಷತ್ನಲ್ಲಿ ವೈ.ಎ.ನಾರಾಯಣಸ್ವಾಮಿ, ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಪ್ರತಿಪಕ್ಷಗಳ ಹಲವು ಸದಸ್ಯರು ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಬೇಕು ಎಂದು ಆಗ್ರಹಿಸಿದರು.