ಜಿಲ್ಲೆ

ಎಸ್ಕಾಂಗಳ ಖಾಸಗೀಕರಣ ಬೇಡ

ರಾಮನಗರ: ರಾಜ್ಯದಲ್ಲಿನ ಎಸ್ಕಾಂಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್​ನ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ, ವಿದ್ಯುತ್ ಪ್ರಸರಣ ನಿಗಮದ ಖಾಸಗೀಕರಣ ಬೇಡವೇ ಬೇಡ, ಸರ್ಕಾರ ಇದಕ್ಕೆ ಸಮ್ಮತಿ ನೀಡಬಾರದು ಎಂದು ಘೊಷಣೆ ಕೂಗಿ ಅಸಮಾಧಾನ ಹೊರಹಾಕಿದರು.

ಈ ವೇಳೆ ಲೆಕ್ಕ ಅಧೀಕ್ಷಕ ಸತೀಶ್ ಮಾತನಾಡಿ, ನಿಗಮದ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸುವುದು ಅನಿವಾರ್ಯ ವಾಗಿದೆ. ಕೋವಿಡ್ ಸಮಯದಲ್ಲಿ ನೌಕರರ ಮೇಲೆ ಪರಿಣಾಮ ಬೀರಲಿದ್ದು, 50 ಸಾವಿರ ಪಿಂಚಣಿದಾರರು ಮತ್ತು ಬೆಸ್ಕಾಂನಿಂದ ಸೌಲಭ್ಯ ಪಡೆಯುತ್ತಿರುವ ರೈತರು ಸೇರಿ ಹಲವರಿಗೆ ಅನ್ಯಾಯ ವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರದ ಈ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡದೆ, ಹಾಲಿ ವ್ಯವಸ್ಥೆಯಲ್ಲಿಯೇ ನಿಗಮವನ್ನು ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಗೋಪಾಲಸ್ವಾಮಿ, ಸ್ಥಳೀಯ ಸಮಿತಿ ಅಧ್ಯಕ್ಷ ಸೋಮಶೇಖರ್, ಸದಸ್ಯರಾದ ಮಹದೇವಯ್ಯ, ಚಂದನ, ಪುಟ್ಟರಾಮಯ್ಯ, ಮಾಪನ ಓದುಗ ಕೃಷ್ಣಪ್ರಸಾದ್, ಜೂನಿಯರ್ ಪವರ್​ವ್ಯಾನ್ ನಾಗರಾಜು, ಲೈನ್​ವುನ್​ಗಳಾದ ಕೆ.ಶಿವಲಿಂಗಯ್ಯ, ಬಾಬು, ಸಿ.ಪಿ. ಪ್ರಕಾಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರೈತರ ಬೆಂಬಲ ಅಗತ್ಯ

ಬೆಸ್ಕಾಂನ ಸಹಾಯಕ ಇಂಜಿನಿಯರ್ ಎಲ್.ಪ್ರಭಾಕರ್ ಮಾತನಾಡಿ, ಖಾಸಗೀರಣದಿಂದ ರೈತರ ಕೃಷಿ ಪಂಪ್​ಸೆಟ್ಟು, ಫಿಲೇಚರ್​ಗಳು ಮತ್ತು ಬಡವರ್ಗದವರಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುವುದಿಲ್ಲ. ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶಗಳು ಸಹ ಕೈ ತಪ್ಪಲಿದ್ದು, ಹಲವು ಸಮಸ್ಯೆಗಳನ್ನು ಎದುರಿಸುವ ಪ್ರಸಂಗ ಎದುರಾಗಲಿದೆ. ನಿಗಮದ ನೌಕರರ ಈ ಹೋರಾಟಕ್ಕೆ ರೈತರು ಕೈಜೋಡಿಸುವ ಅಗತ್ಯವಿದೆ ಎಂದರು.