ವಿಜಯಪುರ: ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋದಿಸಿ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಽ ಧರಣಿ ಸತ್ಯಾಗ್ರಹ ಸೋಮವಾರ ೪೦ನೇ ಪೂರೈಸಿತು.
ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾದ್ಯಕ್ಷ ಅಕ್ಷಯ ಅಜಮನಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಬೆಂಬಲ ಸೂಚಿಸಿ ಮಾತನಾಡಿ, ವಿಜಯಪುರ ತೀರಾ ಹಿಂದುಳಿದ ಜಿಲ್ಲೆಯಾಗಿದೆ.
ಬಡವರು, ಹಿಂದುಳಿದ ಮಕ್ಕಳ ಉನ್ನತ ಶಿಕ್ಷಣಕ್ಕೆ ಕಷ್ಟವಾಗುತ್ತದೆ. ಶಿಕ್ಷಣ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಉನ್ನತ ಶಿಕ್ಷಣ ಪಡೆಯಲಾಗುತ್ತಿಲ್ಲ. ಅದಕ್ಕಾಗಿ ಸರ್ಕಾರ ವೈದ್ಯಕೀಯ ಕಾಲೇಜನ್ನು ಖಾಸಗಿಯವರಿಗೆ ಒಪ್ಪಿಸದೆ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಕೂಡಲೇ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮರಾಠ ಸಮಾಜದ ಮುಖಂಡ, ವಿಡಿಎ ಮಾಜಿ ಅಧ್ಯಕ್ಷ ವಿಜಯಕುಮಾರ ಘಾಟಗೆ ಬೆಂಬಲ ವ್ಯಕ್ತಪಡಿಸಿ, ಈ ಹೋರಾಟ ಮುಖ್ಯವಾಗಿದೆ. ನಾವು ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಬಿಡಲ್ಲ. ಜಿಲ್ಲೆಯ ಜನ ರೊಚ್ಚಿಗೇಳುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದರು.
ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಎಂ. ಉಮಾದೇವಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಗಳಿಗೆ ಶಿಕ್ಷಣ, ಆರೋಗ್ಯ, ಮೂಲ ಸಮಸ್ಯೆಗಳನ್ನು ಪೂರೈಸಬೇಕಾದ ಸರ್ಕಾರಗಳು ಸೋತುಹೋಗಿವೆ. ಅವರ ಕೈಯಿಂದಾಗದೆ ಇರುವುದನ್ನು ಖಾಸಗಿಯವರಿಗೆ ಮಾರಿಕೊಳ್ಳುತ್ತಿರುವುದು ದುರಂತದ ಸಂಗತಿ ಎಂದು ಹೇಳಿದರು.
ಲಡಾಯಿ ಪ್ರಕಾಶನದ ಮುಖ್ಯಸ್ಥ ಬಸವರಾಜ್ ಸೂಳಿಭಾವಿ, ಗದಗ ಜೀಲ್ಲೆಯ ದಲಿತ ಸಂಘರ್ಷ ಸಮಿತಿ ಮುಖಂಡ ಮುತ್ತು ಬಿಳಿಯಲಿ, ಕಾಂಗ್ರೆಸ್ ಕಿಸಾನ ಸಭಾದ ರಾಜ್ಯ ಉಪಾಧ್ಯಕ್ಷ ಡಿ.ಎಚ್. ಕಲಾಲ ಬೆಂಬಲ ಸೂಚಿಸಿದರು.
ನಗರ ಸಮೃದ್ಧಿ ಯುವಕ ಯುವತಿಯರ ಯೂನಿಯನ್ ಹಾಗೂ ನಗರ ಗೃಹ ಕಾರ್ಮಿಕರ ಯೂನಿಯನ್ ಸದಸ್ಯರು ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ಹೋರಾಟ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.