ಬೆಳಗಾವಿ: ಜಾತ್ಯತೀತವಾದ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾದ ಶಾಮನೂರು ಶಿವಶಂಕರಪ್ಪ ಅವರು ಜಾತಿಯ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿರುವುದನ್ನು ಖಂಡಿಸುತ್ತೇನೆ. ನಿಮಗೆ ಕಾಂಗ್ರೆಸ್‌ನಲ್ಲಿ ಅವಕಾಶ ಸಿಕ್ಕಿವೆ. ಏಳು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಇನ್ನೆಷ್ಟು ಸ್ಥಾನ ಬೇಕಿತ್ತು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಪ್ರಶ್ನಿಸಿದರು.
ರಾಜ್ಯ ಸರ್ಕಾರದಲ್ಲಿ ಲಿಂಗಾಯತ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಗೆ ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದರು.
‘ನಮ್ಮಲ್ಲಿ ಜಾತಿ ಆಧರಿಸಿ ಯಾರಿಗೂ ಹುದ್ದೆ ಕೊಡುವುದಿಲ್ಲ. ಬೇರೆ ಬೇರೆ ಜಾತಿಯವರಿಗೆ ಎಲ್ಲೆಲ್ಲಿ ಅವಕಾಶ ಮಾಡಿಕೊಡಬೇಕೋ, ಅಲ್ಲಿ ಮಾಡಿಕೊಟ್ಟಿದ್ದೇವೆ. ಲಿಂಗಾಯತರಿಗೆ ಏಳು ಮಂತ್ರಿ ಸ್ಥಾನ ಕೊಟ್ಟಿದ್ದೇವೆ. ಇನ್ನೆಷ್ಟು ಸ್ಥಾನ ಕೊಡಬೇಕು ನಿಮಗೆ ಎಂದು ತಿರುಗೇಟು ನೀಡಿದರು.
ನಿಮಗೆ ಮುಖ್ಯಮಂತ್ರಿ ಸ್ಥಾನ ಬೇಕಿದ್ದರೆ ನಾಯಕತ್ವ ವಹಿಸಿಕೊಳ್ಳಿ. ನಿಮ್ಮ ಸಮುದಾಯದವರಿಂದ ಹೆಚ್ಚಿನ ಮತ ಹಾಕಿಸಿ. ನಂತರ ಗೆದ್ದು ಬಂದು ಮುಖ್ಯಮಂತ್ರಿಯಾಗಿ ಎಂದರು.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ ನಮ್ಮ ಪಕ್ಷ ಗೆಲ್ಲಿಸಿದ್ದಾರೆ. ಲಿಂಗಾಯತರು ಸೇರಿ ಎಲ್ಲ ಸಮುದಾಯದವರು ಆಶೀರ್ವದಿಸಿದ್ದಾರೆ. ಜಾತಿಯ ಆಧಾರದ ಮೇಲೆ ಅಧಿಕಾರ ನೀಡಲಾಗುತ್ತಿದ್ದರೆ, ಸರಿ ಮಾಡಲು ಹೇಳಿ. ಸಿದ್ದರಾಮಯ್ಯ ಅವರಿಗೆ ಬಹಳ ಹತ್ತಿರವಿದ್ದವರು ನೀವು. ಈ ವಿಷಯವನ್ನೇಕೆ ಬೀದಿಗೆ ಬಂದು ದೊಡ್ಡ ರಂಪಾಟ ಮಾಡುತ್ತಿದ್ದೀರಾ? ಎಂದರು.