ಬಾಳೆಹೊನ್ನೂರು: ರಾಷ್ಟ್ರೀಯ ಶಿಕ್ಷಣ ಯೋಜನೆಯಡಿ ಹಲವು ಸುಧಾರಣೆಗಳು ಅಗತ್ಯವಿದ್ದು, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.
ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶೃಂಗೇರಿ ಕ್ಷೇತ್ರ ಮಟ್ಟದ ಶೈಕ್ಷಣಿಕ ಸಮಾಗಮ, ಶೈಕ್ಷಣಿಕ ಕಾರ್ಯಾಗಾರ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಶಾಸಕ, ಮಂತ್ರಿಗಳಿಗೆ ಏನು ಕೆಲಸ? ರಾಜಕಾರಣಿಗಳಿಗೆ ಪಠ್ಯದ ವಿಚಾರದಲ್ಲಿ ಯಾವ ಅರ್ಥ ಗೊತ್ತಿದೆ? ಪಠ್ಯ ಪರಿಷ್ಕರಣೆಗೆ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದರೆ ಸಾಕು ಎಂದರು.
ಶಿಕ್ಷಕರು ಸಮಾಜದ ಮುಖ್ಯವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಇಂದಿನ ಶಿಕ್ಷಕರು ಹಲವು ಒತ್ತಡಗಳ ನಡುವೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಸಮಾಜದ ಸ್ವಾಸ್ಥೃ ಕಾಪಾಡುವುದು, ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿ. ಅಂಕ, ರ‌್ಯಾಂಕ್‌ಗಳಿಸುವು ಮಾತ್ರ ಶಿಕ್ಷಣವಲ್ಲ. ವಿದ್ಯಾರ್ಥಿಗಳಿಗೆ ಸಂಸ್ಕಾರದ ಶಿಕ್ಷಣ ನೀಡಬೇಕಿದೆ ಎಂದು ತಿಳಿಸಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ದೇಶದ ಉದ್ಧಾರ, ಅವನತಿಯಲ್ಲಿ ಶಿಕ್ಷಕರು ಪ್ರಮುಖ ಪ್ರಮುಖವಾಗಿದೆ. ಶಿಕ್ಷಕರು ಶಿಕ್ಷಣದಲ್ಲಿ ಜಾತಿ, ಮತ, ಧರ್ಮವನ್ನು ಅನುಸರಿಸಬಾರದು. ಎಳೆ ವಯಸ್ಸಿನಲ್ಲಿ ವಿದ್ಯಾರ್ಥಿಗಳಿಗೆ ಇಲ್ಲಸಲ್ಲದ ವಿಷಯ ತುಂಬಿದರೆ ದುರ್ಜನರಾಗಿ ಹೊರಹೊಮ್ಮುತ್ತಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಎಚ್ಚರಿಕೆ ವಹಿಸಬೇಕು ಎಂದರು.
ಶಿವಮೊಗ್ಗದ ಮನೋವೈದ್ಯೆ ಶುಭ್ರತಾ ಹದಿಹರೆಯದ ಸಮಸ್ಯೆಗಳ ಕುರಿತು ಉಪನ್ಯಾಸ ನೀಡಿ, ವಿದ್ಯಾರ್ಥಿಗಳಲ್ಲಿ ಹದಿಹರೆಯದರಲ್ಲಿ ಆಸೆ, ಆಕಾಂಕ್ಷೆಗಳು ಸಹಜವಾಗಿದ್ದು, ನಿಜ ಜೀವನದ ಕುರಿತು ಶಿಕ್ಷಕರು ಅರ್ಥ ಮಾಡಿಸಬೇಕಿದೆ. ಜಾಲ ತಾಣಗಳಲ್ಲಿ ಬರುವ ಎಲ್ಲಾ ವಿಚಾರಗಳು ವಾಸ್ತವವಲ್ಲ ಎಂದು ತಿಳಿಸಿ ಅರಿವು ಮೂಡಿಸಬೇಕು. ಪ್ರಮುಖವಾಗಿ ವಯಸ್ಸು, ಕಾನೂನಿನ ಕುರಿತು ಅರಿವು ಮೂಡಿಸಬೇಕು ಎಂದರು.