ತುಮಕೂರು: ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ಈ ಬಾರಿ ರಂಜಾನ್ ಹಬ್ಬದ ಆಚರಣೆ ವೇಳೆ ಮಸೀದಿಗಳಲ್ಲಿ ಪ್ರಾರ್ಥನೆ, ಇಫ್ತಾರ್ ಕೂಟ ಆಯೋಜಿಸದಿರುವುದು ಸೇರಿ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೊರಡಿಸಿದೆ.
ಮಸೀದಿಯಲ್ಲಿ ಜುಮ್ಮಾ ಹಾಗೂ ತರವೀಹ್ ಪ್ರಾರ್ಥನೆ ಸೇರಿ 5 ಬಾರಿ ಸಭೆಯ ಪ್ರಾರ್ಥನೆ ಮಾಡಲು ಅವಕಾಶ ನೀಡಬಾರದು. ಜುಮ್ಮಾ ಮತ್ತು ತರವೀಹ್ ಸೇರಿ ನಮಾಜ್‌ಗೆ ನೀಡಲು ಸಾರ್ವಜನಿಕ ವಿಳಾಸ ವ್ಯವಸ್ಥೆಯನ್ನು ಮಸೀದಿಯ ಸಿಬ್ಬಂದಿ ಬಳಸಬಾರದು. ಸಾರ್ವಜನಿಕ ವಿಳಾಸ ವ್ಯವಸ್ಥೆಯ ಮೂಲಕ ಅಜಾನ್‌ಗೆ ಕಡಿಮೆ ಡೆಸಿಬಲ್‌ನಲ್ಲಿ ನೀಡಲಾಗುವುದು. ಸಾಮಾನ್ಯವಾಗಿ ರಂಜಾನ್ ತಿಂಗಳಲ್ಲಿ ಮಾಡಿದಂತೆ ಸಹ್ರಿಯ ಅಂತ್ಯ ಮತ್ತು ಇಫ್ತಾರ್ ಆರಂಭದ ಬಗ್ಗೆ ಪ್ರಕಟಣೆಗಳನ್ನು ನೀಡಲು ಮಸೀದಿಯ ಮೌಲಾನ ಅಥವಾ ಇಮಾಮ್ ಮಾತ್ರ ಮಾಡಬೇಕು. ದಾವತ್-ಎ-ಸಹ್ರಿ ಅಥವಾ ಇಫ್ತಾರ್ ಕೂಟಗಳ ವ್ಯವಸ್ಥೆ ಆಯೋಜಿಸಬಾರದು.
ಮೊಹಲ್ಲಾಗಳಲ್ಲಿ ವಿತರಣೆಗಾಗಿ ಮಸೀದಿ ಆವರಣದಲ್ಲಿ ಗಂಜಿ, ಜ್ಯೂಸ್ ತಯಾರಿಸುವಂತಿಲ್ಲ. ಜತೆಗೆ ಮಸೀದಿ, ದರ್ಗಾ ಬಳಿ ಯಾವುದೇ ಉಪಹಾರ ಗೃಹಗಳನ್ನು ಸ್ಥಾಪಿಸಲು ಅನುಮತಿ ನೀಡುವುದಿಲ್ಲ. ಪವಿತ್ರ ರಂಜಾನ್ ಹಬ್ಬದ ಆಚರಣೆಯಲ್ಲಿ ಉಪವಾಸ ಆಚರಣೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಲು ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಜಾವೇದ್ ಕರಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಮಾರ್ಟ್‌ಸಿಟಿ ಕಾಮಗಾರಿಗಳಿಗೆ ಮತ್ತೆ ಚಾಲನೆ : ಲಾಕ್‌ಡೌನ್ ನಡುವೆ ಕೆಲವು ಷರತ್ತುಬದ್ಧ ವಿನಾಯಿತಿಯನ್ನು ಕೇಂದ್ರ ಸರ್ಕಾರ ನೀಡಿರುವ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ಸ್ಥಗಿತಗೊಂಡಿದ್ದ ಸ್ಮಾರ್ಟ್‌ಸಿಟಿ ಕಾಮಗಾರಿಗಳಿಗೆ ಮತ್ತೆ ಚಾಲನೆ ನೀಡಲಾಗಿದೆ. ಕಾಮಗಾರಿಗಳ ಎಲ್ಲ ಗುತ್ತಿಗೆದಾರರಿಗೆ ಕಾಮಗಾರಿ ಪುನರಾರಂಭಿಸುವಂತೆ ‘ತುಮಕೂರು ಸ್ಮಾರ್ಟ್‌ಸಿಟಿ ಕಂಪನಿ ಲಿಮಿಟೆಡ್’ ತುರ್ತು ಪತ್ರ ಬರೆದಿದೆ. ಸ್ಮಾರ್ಟ್‌ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ಅವರು ಕೇಂದ್ರ ಸರ್ಕಾರದ ಸೂಚನೆಗಳ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಗೊಳಿಸಲು ಸ್ಥಗಿತಗೊಂಡಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ಮತ್ತೆ ಆರಂಭಿಸಲು ತಕ್ಷಣವೇ ಗುತ್ತಿಗೆದಾರರು ಕಾರ್ಯಪ್ರವೃತ್ತರಾಗುವಂತೆ ಪತ್ರದಲ್ಲಿ ಸೂಚಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಎಲ್ಲ ಗುತ್ತಿಗೆದಾರರು ಕೆಲಸಕ್ಕೆ ಅಗತ್ಯವಾದ ಕಾರ್ಯಪಡೆಯನ್ನು, ಯಂತ್ರೋಪಕರಣಗಳನ್ನು ಹಾಗೂ ಅಗತ್ಯ ವಸ್ತುಗಳನ್ನು ತಕ್ಷಣವೇ ಹೊಂದಿಸಿಕೊಳ್ಳಬೇಕು. ಇದಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಇತ್ಯಾದಿ ಮುಂಜಾಗ್ರತಾ ಕ್ರಮಗಳನ್ನು ಕಾರ್ಯಸ್ಥಳದಲ್ಲಿ ವ್ಯವಸ್ಥೆ ಮಾಡಬೇಕು.
ಸ್ವಗ್ರಾಮಗಳಿಗೆ ಕಾರ್ಮಿಕರು: ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ವಲಸೆ ಕಾರ್ಮಿಕರು ತಮ್ಮ ಕುಟುಂಬದೊಂದಿಗೆ ತಕ್ಷಣವೇ ತಮ್ಮ ಗ್ರಾಮಗಳಿಗೆ ಹಿಂದಿರುಗಿದ್ದರು. ಕೆಲವರು ಮಾರ್ಗ ಮಧ್ಯೆಯೇ ಸಿಲುಕಿದ್ದು ಅಂತಹವರು ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. ಹಾಗಾಗಿ, ಈಗ ಕಾಮಗಾರಿಗಳ ಪುನರಾರಂಭಕ್ಕೆ ಹಿನ್ನಡೆಯಾಗುವ ಸಾಧ್ಯತೆಯೇ ಹೆಚ್ಚು.
ತೆರಿಗೆ ಸಂಗ್ರಹಕ್ಕೆ ಮನೆ ಬಾಗಿಲಿಗೆ ಸಿಬ್ಬಂದಿ: ಸ್ವಯಂ ಘೋಷಿತ ಪದ್ದತಿಯಡಿ ಆಸ್ತಿತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಪಾಲಿಕೆಯ ಸಿಬ್ಬಂದಿ ಸಂಬಂಧಿಸಿದ ಆಸ್ತಿದಾರರ ಮನೆಬಾಗಿಲಿಗೆ ಬಂದು ತೆರಿಗೆ ಪಾವತಿಸಿಕೊಳ್ಳುವರು ಎಂದು ತುಮಕೂರು ಮಹಾನಗರ ಪಾಲಿಕೆಯು ತಿಳಿಸಿದೆ. ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಅಗತ್ಯವಿದ್ದಲ್ಲಿ ಪಾಲಿಕೆಯ ಅಧಿಕಾರಿಗಳಾದ ನೀಲಲೋಚನಪ್ರಭು (8197796017), ಶೇಖರ್ ಬಾಬು (99015 99666), ಸರಸ್ವತಿ (98800 28664), ನರಸಿಂಹಮೂರ್ತಿ (97422 26255), ಮಹೇಶ್ (94485 20364) ಸಂಪರ್ಕಿಸಬಹುದು.