ಸುಳ್ಯ: ಸರ್ಕಾರಿ ಆಸ್ಪತ್ರೆಯಲ್ಲಿರುವ 108 ಅಂಬ್ಯುಲೆನ್ಸ್ ವಾಹನವನ್ನು ಆಸ್ಪತ್ರೆಯ ಶೆಡ್‌ನಲ್ಲಿ ನಿಲ್ಲಿಸಲು ಆಸ್ಪತ್ರೆಯವರು ತಕರಾರು ಮಾಡುತ್ತಿರುವುದರಿಂದ ಆಂಬ್ಯುಲೆನ್ಸ್ ನಿಲ್ಲಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು 108 ಆಂಬ್ಯುಲೆನ್ಸ್ ಚಾಲಕರು ಮತ್ತು ಸಿಬ್ಬಂದಿ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದಾರೆ.
8 ವರ್ಷಗಳಿಂದ ತಾಲೂಕು ಆಸ್ಪತ್ರೆ ಸುಳ್ಯ ಇಲ್ಲಿ 108 ಆಂಬುಲೆನ್ಸ್ ಕಾರ್ಯ ನಿರ್ವಹಿಸುತ್ತಿದ್ದು ಈ ಆಂಬುಲೆನ್ಸ್ ನಿಲುಗಡೆಗೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿತ್ತು. ಆದರೆ ಇತ್ತೀಚಿಗೆ ಕೆಲ ಸಮಯದಿಂದ ಅಲ್ಲಿ ಆಂಬುಲೆನ್ಸ್ ನಿಲ್ಲಿಸುವುದಕ್ಕೆ ಆಕ್ಷೇಪ ಮಾಡಲಾಗುತ್ತಿದೆ. ಏಕೆಂದರೆ ಆಸ್ಪತ್ರೆಯಲ್ಲಿ ಮೊದಲು ಎರಡು ಆಂಬುಲೆನ್ಸ್ ಇದ್ದು, ಇದೀಗ ಮತ್ತೊಂದು ಆಂಬುಲೆನ್ಸ್ ಬಂದಿದೆ. ಹೀಗಾಗಿ ಅದಕ್ಕೂ ಸ್ಥಳಾವಕಾಶ ಮಾಡಿಕೊಡಬೇಕಾದುದರಿಂದ ಶೆಡ್‌ನಲ್ಲಿ 108 ಆಂಬುಲೆನ್ಸ್ ನಿಲುಗಡೆ ಸಾಧ್ಯವಿಲ್ಲ ಎಂಬಂತಾಗಿದೆ.
ಇದರಿಂದಾಗಿ 108 ಆಂಬುಲೆನ್ಸ್ ಆಸ್ಪತ್ರೆಯ ಹೊರಗಡೆ ರಸ್ತೆ ಬದಿ ನಿಲ್ಲಿಸಬೇಕಾದ ಅನಿವಾರ್ಯತೆ ಇರುವ ಕಾರಣ ಸೂಕ್ತ ಸ್ಥಳಾವಕಾಶ ಮಾಡಿಕೊಡಬೇಕೆಂದು ಆಂಬುಲೆನ್ಸ್ ಚಾಲಕರು ಸಚಿವರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.