ಜಿಲ್ಲೆ

ಸೊರಗಿದ ಸ್ಕೇಟಿಂಗ್ ಕ್ರೀಡಾಂಗಣ

Dakshina Kannada

ನಗರದ ಕದ್ರಿ ಉದ್ಯಾನವನದ ಬಳಿ ಇರುವ ಸ್ಕೇಟಿಂಗ್ ಕ್ರೀಡಾಂಗಣ ನಿರ್ವಹಣೆಗೆ ತೋಟಗಾರಿಕೆ ಇಲಾಖೆ ಮೂರು ಬಾರಿ ಟೆಂಡರ್ ಕರೆದರೂ ಬಿಡ್ಡುದಾರರು ಬಂದಿಲ್ಲ. ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣ ಪ್ರಸ್ತುತ ಸಮರ್ಪಕ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.

ತೋಟಗಾರಿಕಾ ಇಲಾಖೆಗೆ ಸೇರಿದ ಜಾಗದಲ್ಲಿ 2008ರಲ್ಲಿ ಸ್ಕೇಟಿಂಗ್ ಕ್ರೀಡಾಂಗಣ ಕಾಮಗಾರಿ ಆರಂಭವಾಗಿ, ನಿಧಾನ ಗತಿಯಲ್ಲಿ ಸಾಗಿ 2011ರಲ್ಲಿ ಪೂರ್ಣಗೊಂಡಿತ್ತು. ಮೆಸ್ಕಾಂ ಸಹಾಯದಿಂದ 12 ಲಕ್ಷ ರೂ. ಮತ್ತು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ವತಿಯಿಂದ 4 ಲಕ್ಷ ರೂ. ವೆಚ್ಚದಲ್ಲಿ ರಿಂಕ್ ನಿರ್ಮಾಣ ಮಾಡಲಾಗಿತ್ತು. ಇಲ್ಲಿ ಜಿಲ್ಲಾ ಮಟ್ಟದ, ಶಾಲಾ ವಲಯದ ಅನೇಕ ಸ್ಕೇಟಿಂಗ್ ಪಂದ್ಯಾಟಗಳು ನಡೆದಿವೆ.

ಕ್ರೀಡಾಂಗಣ ನಿರ್ವಹಣೆ ಸಲುವಾಗಿ ಟೆಂಡರ್ ಕರೆಯಲಾಗಿದ್ದರೂ, ಕರೊನಾ ಕಾರಣದಿಂದ ಯಾರು ಕೂಡ ಟೆಂಡರ್ ವಹಿಸಲು ಮುಂದಾಗುತ್ತಿಲ್ಲ. ವಿದ್ಯಾರ್ಥಿಗಳು ಸ್ಕೇಟಿಂಗ್ ಕಲಿಯಲು ಬರದಿದ್ದರೆ ನಷ್ಟ ಅನುಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಟೆಂಡರ್ ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಒಂದು ವರ್ಷದಿಂದ ಕ್ರೀಡಾಂಗಣ ಉಪಯೋಗವಿಲ್ಲದೆ ಪಾಳು ಬಿದ್ದಿದೆ. ಸುತ್ತಲೂ ಕಾಡು ಬೆಳೆದು ನಿಂತಿದೆ. ಇಲಾಖೆ ಸಕಾಲದಲ್ಲಿ ನಿರ್ವಹಣೆ ಮಾಡದಿದ್ದರೆ ಮತ್ತೆ ಲಕ್ಷಾಂತರ ರೂ. ಖರ್ಚು ಮಾಡುವ ಅನಿವಾರ್ಯತೆ ಎದುರಾಗಲಿದೆ.

ಅನೈತಿಕ ತಾಣ: ಸ್ಕೇಟಿಂಗ್ ರಿಂಕ್ ಪ್ರವೇಶ ದ್ವಾರದಲ್ಲಿ ದೊಡ್ಡದಾದ ಗೇಟ್ ಅಳವಡಿಸಲಾಗಿದೆ. ಪ್ರಸ್ತುತ ಈ ಗೇಟ್ ತುಕ್ಕು ಹಿಡಿದಿದೆ. ಗೇಟ್ ತುಂಡಾಗಿದ್ದರೂ ಬೀಗ ಜಡಿಯಲಾಗಿದೆ. ಆದರೆ ಒಳಗೆ ಹೋಗುವವರಿಗೆ ಒಂದು ಗೇಟ್ 24 ಗಂಟೆಯೂ ತೆರೆದೇ ಇರುತ್ತದೆ. ಕ್ರೀಡಾಂಗಣದೊಳಗೆ ಬೀಡಿ, ಸಿಗರೇಟ್, ಮದ್ಯದ ಪ್ಯಾಕೇಟ್‌ಗಳು, ಬಿಯರ್ ಬಾಟಲ್‌ಗಳು, ಪ್ಲಾಸ್ಟಿಕ್ ಚೀಲಗಳು ಸೇರಿದಂತೆ ತ್ಯಾಜ್ಯ ತುಂಬಿ ಕೊಂಡಿವೆ. ರಾತ್ರಿ ವೇಳೆ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

 ಸ್ಕೇಟಿಂಗ್‌ಗೆ ಸುಂದರ ಪರಿಸರ: ಸ್ಕೇಟಿಂಗ್ ತರಬೇತಿ ಪಡೆಯಲು ತೆರೆದ ಕ್ರೀಡಾಂಗಣ ಉತ್ತಮ. ಜಿಲ್ಲೆಯಲ್ಲಿ ಬೇರೆ ಎಲ್ಲಿಯೂ ಇಷ್ಟೊಂದು ಸುಂದರವಾದ ತೆರೆದ ಪರಿಸರದಲ್ಲಿ ಸುಸಜ್ಜಿತ ಸ್ಕೇಟಿಂಗ್ ಕ್ರೀಡಾಂಗಣ ಇಲ್ಲ. ಇಲ್ಲಿ ತರಬೇತಿ ಪಡೆದ ಅನೇಕ ಮಂದಿ ರಾಷ್ಟ್ರ, ಅಂ.ರಾ. ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಟೆಂಡರ್ ಕರೆದಾಗ ಬಿಡ್ಡುದಾರರು ಬಂದಿಲ್ಲ ಎಂದು ಕ್ರೀಡಾಂಗಣ ಪಾಳು ಬೀಳಲು ಬಿಡುವುದಕ್ಕಿಂತ ಪರ್ಯಾಯ ವ್ಯವಸ್ಥೆ ಮಾಡಿ ಉಪಯೋಗಕ್ಕೆ ಕಲ್ಪಿಸುವುದು ಉತ್ತಮ ಎಂದು ಸಾಮಾಜಿಕ ಕಾರ್ಯಕರ್ತ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.

ಕದ್ರಿ ಬಳಿ ಇರುವ ಸ್ಕೇಟಿಂಗ್ ಕ್ರೀಡಾಂಗಣ ನಿರ್ವಹಣೆಗೆ ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಬಿಡ್ಡುದಾರರು ಭಾಗವಹಿಸದ ಕಾರಣ ಸದ್ಯ ಸ್ಕೇಟಿಂಗ್ ಕ್ರೀಡಾಂಗಣ ಉಪಯೋಗವಾಗುತ್ತಿಲ್ಲ. ಮಳೆಗಾಲದ ಬಳಿಕ ಮತ್ತೆ ಟೆಂಡರ್ ಕರೆಯಲಾಗುವುದು. ಈ ಜಾಗದಲ್ಲಿ ಟ್ರೀ ಪಾರ್ಕ್, ವಾಕಿಂಗ್ ಟ್ರಾೃಕ್ ಮಾಡುವ ಯಾವುದೇ ಪ್ರಸ್ತಾವನೆಗಳು ಇಲಾಖೆ ಮುಂದಿಲ್ಲ.

ಜಾನಕಿ

ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ