ಕುಮಟಾ: ಜಿಲ್ಲೆಯಲ್ಲಿ ನಿಗದಿಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಈಗಾಗಲೇ ಗುರುತಿಸಲಾಗಿರುವ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳ ಯಾದಿಯನ್ನು ಅಭ್ಯರ್ಥಿತನ ಅಂತಿಮವಾದ ಬಳಿಕವೇ ಮರುಪರಿಶೀಲಿಸಿ ಅಂತಿಮಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ತಿಳಿಸಿದರು.
ಪಟ್ಟಣದ ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಪ್ರಕಟಿತ ಯಾದಿಯು ಕಳೆದ ಚುನಾವಣೆಯ ಸಂದರ್ಭವನ್ನು ಆಧರಿಸಿದ್ದಾಗಿದೆ. ನಾಮಪತ್ರ ಸಲ್ಲಿಕೆಯಾಗಿ ಅಭ್ಯರ್ಥಿಗಳ ಪಟ್ಟಿ ಪೂರ್ಣಗೊಂಡ ಬಳಿಕವೇ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳನ್ನು ಮರು ಸಂಯೋಜಿಸಲಾಗುತ್ತದೆ. ಅದರ ಬಳಿಕವೇ ಪೊಲೀಸ್ ಬಂದೋಬಸ್ತ್ ವಿವರ ಒದಗಿಸಲಾಗುವುದು. ಕರೊನಾ ನಿಮಿತ್ತ ಚುನಾವಣೆಗೆ ಜಿಲ್ಲೆಯೊಳಗಿನ ಪೊಲೀಸರೇ ಬಂದೋಬಸ್ತ್ ನೀಡಲಿದ್ದು, ಹೊರ ಜಿಲ್ಲೆಯ ಪೊಲೀಸರು ಬರುವುದಿಲ್ಲ. ಇಲ್ಲಿನ ಪೊಲೀಸರಿಗೆ ಬೇರೆ ಜಿಲ್ಲೆಗೆ ಕರ್ತವ್ಯ ನಿಗದಿಸಲಾಗುವುದಿಲ್ಲ. ಕರೊನಾ ಸೋಂಕಿತರಿಗೂ ಚುನಾವಣೆಯಲ್ಲಿ ಅವರ ಮತಗಟ್ಟೆಯೊಳಗೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಕುಮಟಾ ತಾಲೂಕಿನಲ್ಲಿ ಈಗಾಗಲೇ ಮತಗಟ್ಟೆಗಳ ಪರಿಶೀಲನೆ ಆಗಿದೆ. 22 ಗ್ರಾಮ ಪಂಚಾಯಿತಿಗಳಿಂದ 321 ಸದಸ್ಯ ಸ್ಥಾನಗಳಿಗಾಗಿ ಡಿ.22 ರಂದು ನಡೆಯುವ ಚುನಾವಣೆಗಾಗಿ 22 ಚುನಾವಣಾಧಿಕಾರಿಗಳು ಹಾಗೂ 24 ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 96 ವಾರ್ಡ್ಗಳಿಗಾಗಿ ಮುಖ್ಯ ಮತಗಟ್ಟೆ 128 ಹಾಗೂ ಹೆಚ್ಚುವರಿ 36 ಮತಗಟ್ಟೆ ಸೇರಿ ಒಟ್ಟೂ 164 ಮತಗಟ್ಟೆಗಳಲ್ಲಿ 4 ಅತಿಸೂಕ್ಷ್ಮ, 48 ಸೂಕ್ಷ್ಮ 112 ಸಾಮಾನ್ಯ ಮತಗಟ್ಟೆಗಳಿವೆ. ಗಂಡು 53505, ಹೆಣ್ಣು 52326 ಒಟ್ಟೂ 105661 ಮತದಾರರಿದ್ದಾರೆ. ಎಸ್.ಸಿ 27, ಎಸ್.ಟಿ. 22, ಹಿಂದುಳಿದ ಅ ವರ್ಗ 78, ಬ ವರ್ಗ 20 ಹಾಗೂ ಸಾಮಾನ್ಯಕ್ಕೆ 174 ಸ್ಥಾನಗಳು ಮೀಸಲಾಗಿದೆ. ಸ್ಥಳೀಯ ಡಾ. ಬಾಳಿಗಾ ಕಾಲೇಜ್ನಲ್ಲಿ ಜಿಲ್ಲೆಯ ಎಲ್ಲ ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಕೋವಿಡ್ ಮಾರ್ಗಸೂಚಿಯ ಬಗ್ಗೆ ಸ್ಪಷ್ಟತೆ ಮತ್ತು ಪಾಲನೆ ಇದೆ. ಹೀಗಾಗಿ ಕರೊನಾ ಬಹಳಷ್ಟು ಇಳಿಮುಖವಾಗಿದ್ದು ಬೆರಳೆಣಿಕೆಗೆ ಇಳಿದಿದೆ. ಎರಡನೇ ಅಲೆಯ ಎಚ್ಚರಿಕೆಯಿದ್ದು ಅದನ್ನು ಸುಳ್ಳು ಮಾಡಬೇಕಿದೆ. ಕರೊನಾ ಬಗ್ಗೆ ಗೊಂದಲ ಹಾಗೂ ಸಂಶಯಗಳನ್ನು ಮೀರಿ ಎಲ್ಲರೂ ಕೆಲಸ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಉಪವಿಭಾಗಾಧಿಕಾರಿ ಅಜಿತ್ ಎಂ. ರೈ, ತಹಸೀಲ್ದಾರ್ ಮೇಘರಾಜ ನಾಯ್ಕ ಇದ್ದರು.
ಎರಡನೇ ದಿನ 201 ನಾಮಪತ್ರ ಸಲ್ಲಿಕೆ
ಕಾರವಾರ: ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಗೆ ಮಂಗಳವಾರ 201 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಾರವಾರದಲ್ಲಿ 23, ಅಂಕೋಲಾದಲ್ಲಿ 54, ಕುಮಟಾದಲ್ಲಿ 48, ಹೊನ್ನಾವರದಲ್ಲಿ 9, ಭಟ್ಕಳದಲ್ಲಿ 80 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕರಾವಳಿಯ 5 ತಾಲೂಕುಗಳ 101 ಗ್ರಾಪಂಗಳ 1380 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಸೋಮವಾರ 40 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಒಟ್ಟಾರೆ 241 ನಾಮಪತ್ರಗಳು ಸಲ್ಲಿಕೆಯಾದಂತಾಗಿವೆ.
ಭಟ್ಕಳ ತಾಲೂಕಲ್ಲಿ 33 ಹೆಚ್ಚುವರಿ ಮತಗಟ್ಟೆ ಸ್ಥಾಪನೆ
ಭಟ್ಕಳ: ತಾಲೂಕಿನ ಒಟ್ಟು 16 ಗ್ರಾಮ ಪಂಚಾಯಿತಿಗಳ 80 ಕ್ಷೇತ್ರಗಳ 284 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 104 ಮತದಾನ ಕೇಂದ್ರಗಳನ್ನು ಮಾಡಲಾಗಿದ್ದು ಸಾವಿರಕ್ಕಿಂತ ಹೆಚ್ಚು ಮತಗಳಿರುವ ಮತಗಟ್ಟೆಗಳನ್ನು ಒಡೆದು 33 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಹೇಳಿದರು.
ಭಟ್ಕಳ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳಿಗೆ ಖರ್ಚು ವೆಚ್ಚದ ಕುರಿತು ಯಾವುದೇ ಮಿತಿ ನಿಗದಿ ಮಾಡಿಲ್ಲ, ಆದರೆ, ಖರ್ಚು ವೆಚ್ಚದ ಕುರಿತು ನಿಗಾ ವಹಿಸಲಾಗುವುದು. ಅತಿರೇಕ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಭಟ್ಕಳದಲ್ಲಿ 16 ಗ್ರಾಪಂ ವ್ಯಾಪ್ತಿಯಲ್ಲಿ 46,965 ಪುರುಷ, 45,563 ಮಹಿಳಾ ಮತದಾರರಿದ್ದು ಒಟ್ಟು 92,528 ಮತದಾರರಿದ್ದಾರೆ. 610 ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದ್ದು 8 ಸೆಕ್ಟರ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಲಿದೆ. ಆನಂದ ಆಶ್ರಮ ಕಾನ್ವೆಂಟ್ ಶಾಲೆಯಲ್ಲಿ ತರಬೇತಿ ನೀಡಲಾಗುತ್ತಿದ್ದು ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮತಗಟ್ಟೆಗಳಿಗೆ ಮತ ಪೆಟ್ಟಿಗೆ, ಬ್ಯಾಲೆಟ್ ಪೇಪರ್ಗಳನ್ನು ಕೊಡುವ ವ್ಯವಸ್ಥೆ ಮಾಡಿದ್ದು ಅಲ್ಲಿಯೇ ಮತ ಎಣಿಕೆಯ ದಿನದಂದು ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎ.ಎಸ್.ಪಿ. ನಿಖಿಲ್, ಭಟ್ಕಳ ಉಪವಿಭಾಗಾಧಿಕಾರಿ ಭರತ್ ಎಸ್., ತಹಸೀಲ್ದಾರ್ ರವಿಚಂದ್ರ ಎಸ್. ಇದ್ದರು.