ಜಿಲ್ಲೆ

ಅಂಬೇಡ್ಕರ್‌ರನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ: ನಾ.ದಿವಾಕರ ಬೇಸರ

ಮಂಜುನಾಥ ತಿಮ್ಮಯ್ಯ

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಪರಿಪೂರ್ಣವಾಗಿ ಯಾರೂ ಇನ್ನೂ ಅರ್ಥ ಮಾಡಿಕೊಂಡಿಲ್ಲ. ಅವರ ಚಿಂತನೆ, ವಿಚಾರಗಳು ತಿಳಿದಿದೆ. ಆದರೆ ಅವರ ಕುರಿತು ತಿಳಿದುಕೊಂಡಿಲ್ಲ ಎಂದು ಚಿಂತಕ, ಬರಹಗಾರ ನಾ.ದಿವಾಕರ ಹೇಳಿದರು.


ದಲಿತ ಸಾಹಿತ್ಯ ಪರಿಷತ್, ಪ್ರಗತಿಪರ ಸಂಘಟನೆಗಳ ಸಮನ್ವಯ ವೇದಿಕೆ, ಚಳವಳಿ ಪ್ರಕಾಶನ ಸಹಯೋಗದಲ್ಲಿ ಡಾ.ಕೆ.ಪಿ.ಮಹಾಲಿಂಗು ಕಲ್ಕುಂದ ಅವರ ‘ವಿಮೋಚನ ದರ್ಶನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಅಂಬೇಡ್ಕರ್ ಚಿಂತನೆ ಕುರಿತು ಅನೇಕ ಸಂಶೋಧನೆ, ಅಧ್ಯಯನ ನಡೆದಿವೆ. ಅನೇಕ ಭಾಷೆಯಲ್ಲಿ ಸಾಹಿತ್ಯ, ಕೃತಿಗಳು ಪ್ರಕಟಗೊಂಡಿವೆ. ಆದರೆ ಅವರನ್ನು ಎಲ್ಲರೂ ಅರ್ಥ ಮಾಡಿಕೊಂಡಿಲ್ಲ ಎಂಬ ಕೊರತೆ ಇದೆ. ಅಂಬೇಡ್ಕರ್ ಎಂದ ತಕ್ಷಣವೇ ಸಂವಿಧಾನ, ಅದರ ಮೂಲಕ ನೀಡುವ ಸಮಾನತೆ, ಸಾಮಾಜಿಕ ನ್ಯಾಯ, ಭ್ರಾತೃತ್ವ, ಸವಲತ್ತು, ಸೌಲಭ್ಯದಷ್ಟೇ ತಿಳಿದುಕೊಂಡಿದ್ದೇವೆ. ಆದರೆ ಅಂಬೇಡ್ಕರ್ ಏನು? ಎಂಬುದು ಅರ್ಥೈಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ವರ್ತಮಾನ ತಿಳಿದುಕೊಳ್ಳಲು ಅಂಬೇಡ್ಕರ್ ಅವರನ್ನು ತಿಳಿದುಕೊಳ್ಳಬೇಕು. ರಾಜಕೀಯ ಅಂಬೇಡ್ಕರ್, ಸಾಮಾಜಿಕ ಅಂಬೇಡ್ಕರ್, ಧಾರ್ಮಿಕ ಅಂಬೇಡ್ಕರ್…. ಹೀಗೆ ವಿವಿಧ ಆಯಾಮದಲ್ಲಿ ಅರ್ಥ ಮಾಡಿಕೊಳ್ಳಬೇಕು ಎಂದರು.


ಬುದ್ಧ, ಬಸವಣ್ಣರಿಂದ ಹಿಡಿದು ಅನೇಕ ಮಹನೀಯರು ಸಮಾಜ ಸುಧಾರಣೆಗೆ ಪ್ರಯತ್ನಿಸಿ ವಿಫಲರಾದರು. ಆದರೆ ಅಂಬೇಡ್ಕರ್ ಮಾತ್ರ ವೈಚಾರಿಕ, ವೈಜ್ಞಾನಿಕ ನೆಲೆಯಲ್ಲಿ ಸಮಾಜ ಸುಧಾರಣೆಗೆ ಪ್ರಯತ್ನಿಸಿ ಯಶಸ್ಸು ಕಂಡವರು. ದಕ್ಷಿಣ ಭಾರತದಲ್ಲಿ ಪೆರಿಯಾರ್ ಈ ರೀತಿ ದೃಷ್ಟಿಕೋನ ಹೊಂದಿದ್ದರು ಎಂದರು.


ಅಂಬೇಡ್ಕರ್ ಮೊದಲ ಬಾರಿಗೆ ಪಿತೃಪ್ರಧಾನ ವ್ಯವಸ್ಥೆಯನ್ನು ಭೇದಿಸಿದವರು. ಸಮಾಜದ ಸುಧಾರಣೆಗೆ ವೈಜ್ಞಾನಿಕ, ವೈಚಾರಿಕ, ರಾಜಕೀಯ ಆಯಾಮ ಕೊಟ್ಟರು. ಹಿಂದಿನ ಸುಧಾರಣಾ ಪ್ರಕ್ರಿಯೆ ಈ ಹಾದಿಯಲ್ಲಿ ನಡೆದಿರಲಿಲ್ಲ. ಹೀಗಾಗಿ ಅಂಬೇಡ್ಕರ್ ಒಬ್ಬ ಸಾಂಸ್ಕೃತಿಕ ನಿರ್ದೇಶಕ, ಸಮಾಜದ ದೂರಗಾಮಿ, ದಾರ್ಶನಿಕ, ರಾಜಕೀಯ ತಜ್ಞ ಎಂದರು.


ಇಷ್ಟಾಗಿಯೂ ಅಂಬೇಡ್ಕರ್ ದೇಶದ ಜನರ ಮನದೊಳಗೆ ಇಲ್ಲ. ಆ ಸ್ಥಾನದಲ್ಲಿ ಮನುಸ್ಮತಿ ಬೇರೂರಿದೆ. ಮನುಸ್ಮತಿಯ ಯಜಮಾನಿ, ಪಿತೃಪ್ರಧಾನ ವ್ಯವಸ್ಥೆ, ಸ್ತ್ರೀ ಶೋಷಣೆ, ಜಾತಿ ವ್ಯವಸ್ಥೆ ವಿವಿಧ ಸಾಮಾಜಿಕ ಸಮಸ್ಯೆಗಳು ಹೀಗೆ ಮುಂದುವರಿಯುತ್ತಿವೆ. ಆದರೆ ಸಮಾಜದ ಸುಧಾರಣೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದರು.


ಸ್ವಾತಂತ್ರೃ ಬಳಿಕ ಅಂಬೇಡ್ಕರ್ ಮೊದಲ ಸ್ತ್ರೀವಾದಿ. ಪಿತೃಪ್ರಧಾನ ವ್ಯವಸ್ಥೆ ಭೇದಿಸುವ ಮೂಲಕ ಮಹಿಳಾ ಸುಧಾರಣೆಗೆ ಪ್ರಯತ್ನಿಸಿದರು. ಅವರಿಗಾಗಿಯೇ ಸಂವಿಧಾನದ ಮೂಲಕ ಕಾನೂನು ರೂಪಿಸಿದವರು. ಸಾಮಾಜಿಕ ಸಮಸ್ಯೆಗಳು, ಜಾತಿ ಪದ್ಧತಿ, ಶ್ರೇಷ್ಠ-ಕನಿಷ್ಠ, ಭಾರತದ ಒಳ ಸುಳಿವು ಅರ್ಥ ಮಾಡಿಕೊಳ್ಳಲು ‘ಅಂಬೇಡ್ಕರ್ ಮಸೂರ ಕನ್ನಡಕ’ ಬೇಕು ಎಂದರು.


1980ರ ಬಳಿಕವೇ ಅಂಬೇಡ್ಕರ್ ಪರಿಚಯವಾಯಿತು. ನಂತರವೇ ಅವರು ಆವರಿಸಿಕೊಂಡರು. ಇದು ಅಗತ್ಯವಾಗಿತ್ತು. ಅವರ ಚಿಂತನೆ ಬಿಟ್ಟು ಬೇರೆ ಯೋಚನೆ ಮಾಡಲು ಆಗುವುದಿಲ್ಲ. ದೇಶದ ಕರಾಳತೆ, ಅನ್ಯಾಯ, ಶೋಷಣೆಯ ಆಯಾಮ, ಸಾಮಾಜಿಕ ಸಮಸ್ಯೆಗಳು, ಸಾಂಸ್ಕೃತಿಕ ಸವಾಲುಗಳ ಮೇಲೆ ಪಿತೃಪ್ರಧಾನವೇ ಆವರಿಸಿಕೊಂಡಿದೆ. ಇದನ್ನು ಅರ್ಥಮಾಡಿಕೊಳ್ಳಲು, ಮೀರಲು ಅಂಬೇಡ್ಕರ್ ಚಿಂತನೆ ಅಗತ್ಯ ಎಂದರು.

ಕರಾಮುವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ದಲಿತ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ, ಕೃತಿಕಾರ ಡಾ.ಕೆ.ಪಿ.ಮಹಾಲಿಂಗು ಕಲ್ಕುಂದ, ದಸಂಸ ಮುಖಂಡ ಹರಿಹರ ಆನಂದಸ್ವಾಮಿ, ಪ್ರಗತಿಪರ ಸಂಘಟನೆಗಳ ಸಮನ್ವಯ ವೇದಿಕೆಯ ಅಧ್ಯಕ್ಷ ಸೋಮಯ್ಯ ಮಲಿಯೂರು, ಪ್ರದೇಶಾಭಿವೃದ್ಧಿ ಮಂಡಳಿಯ ನಿರ್ದೇಶಕ ಡಿ.ಚಂದ್ರಶೇಖರಯ್ಯ, ಕರಾಮುವಿ ಹಾಸನ ಪ್ರಾದೇಶಿಕ ನಿರ್ದೇಶಕ ಪಿ.ಜಗದೀಶ್ ಇನ್ನಿತರರು ಇದ್ದರು.