ಜಿಲ್ಲೆ

ರೈತರ ವಿಷಯದಲ್ಲಿ ಯಾರು ರಾಜಕಾರಣ ಮಾಡಬಾರದು

ರೈತರ ವಿಷಯದಲ್ಲಿ ಯಾರು ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಅನುಮತಿ ನೀಡದಿರುವುದು ಕೇಂದ್ರ ಬಿಜೆಪಿ ಸರ್ಕಾರ. ಈ ಯೋಜನೆಗೆ ತಕರಾರು ಮಾಡಲು ತಮಿಳುನಾಡಿಗೆ ಯಾವುದೇ ವಿಚಾರವಿಲ್ಲ. ರಾಜ್ಯಕ್ಕೆ ನಿಗದಿಪಡಿಸಿರುವ 177.25 ಟಿಎಂಸಿ ಸಾಮಾನ್ಯ ವರ್ಷಗಳಲ್ಲಿ ನೀರು ಬಿಡಬೇಕು.

ಸಂಕಷ್ಟದ ಸಮಯದಲ್ಲಿ ಸಂಕಷ್ಟದ ಸೂತ್ರ ಅನುಸರಿಸಬೇಕು ಎಂದಿದೆ. ಆದರೆ ತಮಿಳುನಾಡಿನವರು ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಈ ಯೋಜನೆಗೆ ಸಂಬಂಧಿಸಿದ ಡಿಪಿಆರ್ ನೀಡಲಾಗಿದೆ ಎಂದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಬಿಜೆಪಿಯವರು ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಿಕೊಳ್ಳಬೇಕು. ಆದರೆ, ರಾಜ್ಯ ಬಿಜೆಪಿಯವರು ಸರ್ವಪಕ್ಷ ಸಭೆಯಲ್ಲಿ ಕಾವೇರಿ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಸಹಕರಿಸುವುದಾಗಿ ತಿಳಿಸಿ, ಇಲ್ಲಿ ಇದೇ ವಿಷಯದ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ಮೈಸೂರು, ಬೆಂಗಳೂರು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವುದು ನೀರು ನೀತಿಯಂತೆ ಮೊದಲ ಆದ್ಯತೆಯಾಗಿದೆ. ಈ ಮಧ್ಯೆ ರೈತರ ಹಿತ ಕಾಪಾಡಬೇಕು. ಸರ್ವೋಚ್ಛ ನ್ಯಾಯಾಲಯದಲ್ಲಿ ತಮಿಳುನಾಡು ಕೇಸು ದಾಖಲಿಸಿದ್ದು, ರಾಜ್ಯದ ನಿಲುವನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಲಿದೆ. ಯಾವುದೇ ಕಾರಣಕ್ಕೆ ರಾಜ್ಯದ ರೈತರ ಹಿತರಕ್ಷಣೆಯ ವಿಷಯದಲ್ಲಿ ರಾಜಕಾರಣ ಬೇಡ. ಈ ವಿಚಾರವಾಗಿ ಸರ್ವಪಕ್ಷ ನಿಯೋಗದ ಭೇಟಿಗೆ ಪ್ರಧಾನಮಂತ್ರಿಗಳ ಸಮಯ ಕೋರಿದ್ದು, ಯಾವುದೇ ಉತ್ತರ ಬಂದಿಲ್ಲವಾದ್ದರಿಂದ, ರಾಜ್ಯ ಬಿಜೆಪಿ ಸಂಸದರು, ಭೇಟಿಗೆ ಸಮಯ ನಿಗದಿಪಡಿಸಲಿ ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಮುಷ್ಕರ ಮಾಡುವವರಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಖಾಸಗಿ ಸಾರಿಗೆಯವರ ಅಹವಾಲುಗಳನ್ನು ಸರ್ಕಾರ ಆಲಿಸಿದೆ. ಶಕ್ತಿಯೋಜನೆಯಿಂದ ಖಾಸಗಿ ಸಾರಿಗೆಯವರಿಗೆ ನಷ್ಟವುಂಟಾಗುತ್ತಿದ್ದು, ಆ ನಷ್ಟವನ್ನು ಭರಿಸಿಕೊಡಬೇಕು ಎಂಬಂತಹ ಅಸಾಧ್ಯ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಹೆಣ್ಣುಮಕ್ಕಳಿಗೆ ಅನುಕೂಲ ಕಲ್ಪಿಸಲು ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.