ಕೂಳೂರು ಸರ್ವಿಸ್ ರಸ್ತೆ ಹೆದ್ದಾರಿ ಮಧ್ಯೆ ಇರುವ ತೋಡು ಸಂಪೂರ್ಣವಾಗಿ ಪೊದೆಯಿಂದಾವೃತವಾಗಿದೆ. 
ಜಿಲ್ಲೆ

ಹೆದ್ದಾರಿ ಬದಿ ಚರಂಡಿ ನೋಡುವವರಿಲ್ಲ!

ಪ್ರಮುಖ ಮುಖ್ಯಾಂಶಗಳು

  • ಕೂಳೂರಿನಲ್ಲಿರುವ ಸಣ್ಣ ತೋಡು ಪೊದೆಯಿಂದಾವೃತ
  • ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ಇತ್ತ ಗಮನಹರಿಸಬೇಕಿದೆ
  • ಮೇ 26ರ ಒಳಗೆ ಎಲ್ಲಾ ಕಡೆಯ ಹೂಳು ತೆಗೆಯುವ ಕಾರ್ಯ: ಜಿಲ್ಲಾಧಿಕಾರಿ

ಮಂಗಳೂರು: ಮಳೆಗಾಲ ಪ್ರಾರಂಭವಾಗಿದೆ. ಇನ್ನೂ ಕೂಡ ಎಷ್ಟೋ ಕಡೆಗಳಲ್ಲಿ ತೋಡುಗಳ ಹೂಳೆತ್ತಿಲ್ಲ. ಹೆದ್ದಾರಿ ಬದಿಯ ತೋಡುಗಳಲ್ಲೇ ನಿರ್ವಹಣೆ ಇಲ್ಲ. ಕೂಳೂರಿನ ಹೃದಯ ಭಾಗದ ರಾಷ್ಟ್ರೀಯ ಹೆದ್ದಾರಿ 66ರ ಬದಿಯ ತೋಡುಗಳು ಪೊದೆಯಿಂದಾವೃತವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.

ಕೂಳೂರು ಮೇಲ್ಸೇತುವೆಯ ತಳಭಾಗದಲ್ಲಿ ಅಂದರೆ ಕೂಳೂರು ಜಂಕ್ಷನ್‌ನಲ್ಲಿ ಆಟೋರಿಕ್ಷಾ ನಿಲ್ದಾಣವಿದೆ. ಇದರ ಪಕ್ಕದಲ್ಲೂ ಸಣ್ಣ ತೋಡು ಇದೆ. ಇಲ್ಲಿ ಪ್ಲಾಸ್ಟಿಕ್, ಕಸ-ಕಡ್ಡಿ, ಮಣ್ಣು ತುಂಬಿ ತೋಡೇ ಇಲ್ಲದಂತಾಗಿತ್ತು. ಮೊನ್ನೆಯಷ್ಟೇ ತೋಡಿನ ಹೂಳನ್ನು ನಗರ ಪಾಲಿಕೆಯವರು ತೆಗೆದಿದ್ದಾರೆ. ಆದರೆ ಅದೂ ಕೂಡ ಸಮರ್ಪಕವಾಗಿ ನಡೆಸಿಲ್ಲ. ತೋಡಿನ ಹೂಳನ್ನು ಆಳಕ್ಕೆ ತೆಗೆದಿಲ್ಲ. ಒಂದೂವರೆ ಫೀಟ್‌ನಷ್ಟು ಮಾತ್ರ ಆಳವಿದೆ. ಸಣ್ಣಗೆ ಮಳೆ ಬಂದರೂ, ಈ ತೋಡಿನಲ್ಲಿ ನೀರು ತುಂಬಿ ಉಕ್ಕಿ ಬರುತ್ತದೆ. ಜೋರು ಮಳೆ ಬಂದರೆ ರಿಕ್ಷಾ ನಿಲ್ದಾಣ, ರಸ್ತೆಗಳೆಲ್ಲ ನೀರು ತುಂಬಿ ಕೆರೆಯಂತಾಗಬಹುದು. ವಾಹನ, ಜನರ ಓಡಾಟಕ್ಕೆ ತೊಂದರೆಯಾಗುವುದು ಮಾತ್ರವಲ್ಲದೆ ಜೀವಹಾನಿಯೂ ಆಗಬಹುದು. ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ಇತ್ತ ಗಮನಹರಿಸಬೇಕಿದೆ.

ಹುಲ್ಲು, ಪೊದೆಯಿಂದಾವೃತ

ಸರ್ವಿಸ್ ರಸ್ತೆಯ ಚಾವಡಿ ಹೋಟೆಲ್‌ನ ಮುಂಭಾಗದಿಂದ ಪ್ರಾರಂಭವಾಗಿ ರಾಯಲ್ ಏಕ್ ಕಟ್ಟಡದವರೆಗೆ ಪೂರ್ವ ಭಾಗದಲ್ಲಿ ಹೆದ್ದಾರಿ ಮತ್ತು ಸರ್ವಿಸ್ ರಸ್ತೆ ಮಧ್ಯೆ ತೋಡು ಇದೆ. ಆದರೆ ಅಷ್ಟೂ ದೂರ ಹುಲ್ಲು ಬೆಳೆದು ತೋಡು ಕಾಣುವುದೇ ಇಲ್ಲ. ಮಳೆಗಾಲದಲ್ಲಿ ಮಾತ್ರ ಇಲ್ಲಿ ಬಹಳ ಸಮಸ್ಯೆಯಾಗುತ್ತದೆ. ಯಾಕೆಂದರೆ ಈ ತೋಡು ನೀರಿನಿಂದ ತುಂಬುತ್ತದೆ. ರಸ್ತೆ ಯಾವುದು, ತೋಡು ಯಾವುದು ಎನ್ನುವುದೇ ತಿಳಿಯುವುದಿಲ್ಲ. ವಾಹನ ಸವಾರರು ರಸ್ತೆ ಎಂದೇ ಭಾವಿಸಿ ಹೆದ್ದಾರಿಯಿಂದ ಚರಂಡಿಗೆ ಬೀಳುತ್ತಾರೆ. ಸಾವು-ನೋವಾಗುತ್ತದೆ.

ಕೂಳೂರು ನಿಲ್ದಾಣದಲ್ಲಿ ಕೆರೆ ಸೃಷ್ಟಿ!

ಕೂಳೂರಿನಲ್ಲಿ ಒಂದು ಬದಿಯಲ್ಲಿ ತೋಡಿದ್ದರೂ, ಇಲ್ಲದಂತಾಗಿದೆ. ಇನ್ನೊಂದು ಬದಿಯಲ್ಲಿ ತೋಡೇ ಇಲ್ಲದಾಗಿದೆ. ಕೂಳೂರು ಸೇತುವೆಯಿಂದ ಹಿಡಿದು ಕೊಟ್ಟಾರದ ಗೋಲ್ಡ್ ಫಿಂಚ್ ಸಿಟಿ ಮುಂಭಾಗದವರೆಗೆ ಹೆದ್ದಾರಿಯ ಪಶ್ಚಿಮ ಭಾಗದಲ್ಲಿ ತೋಡೇ ಇಲ್ಲ. ಕಳೆದ ಮಳೆಗಾಲದಲ್ಲಿ ಭಾರಿ ಸಮಸ್ಯೆಯಾಗಿತ್ತು ಎನ್ನುವುದನ್ನು ಇಲ್ಲಿನವರು ಹೇಳುತ್ತಾರೆ. ಹೆದ್ದಾರಿ ಬಡಿಯಲ್ಲೇ ಅದೂ ಕೂಡ ಜಂಕ್ಷನ್‌ನಲ್ಲೇ ತೋಡಿಲ್ಲವೆಂದಾದರೆ ನೀರು ಹರಿದು ಹೋಗುವುದಾದರೂ ಎಲ್ಲಿಗೆ? ನೀರೆಲ್ಲ ರಸ್ತೆ, ರಸ್ತೆ ಬಡಿಯಲ್ಲೇ ನಿಂತು ಕೃತಕ ಕೆರೆ ನಿರ್ಮಾಣವಾಗಬಹುದು. ಇಲ್ಲಿ ಖಾಸಗಿ ನರ್ಸಿಂಗ್ ಕಾಲೇಜು, ಮಳಿಗೆ, ಶೋರೂಂ, ಅಂಗಡಿ, ಮನೆಗಳಿವೆ. ಇವುಗಳೊಳಗೂ ನೀರು ತುಂಬಬಹುದು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಟ್ಟೆ ಒದ್ದೆ ಮಾಡಿಕೊಂಡು ಶಿಕ್ಷಣ ಪಡೆಯಬೇಕಾಗಬಹುದು. ಜಿಲ್ಲಾಧಿಕಾರಿಗಳು ತುರ್ತಾಗಿ ಈ ಭಾಗದತ್ತ ಗಮನ ಕೊಡಬೇಕಾಗಿದೆ. ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ಕೊಡಬೇಕಾಗಿದೆ.

ಹೂಳು ತುಂಬಿರುವ ಕಾಲುವೆ, ತೋಡುಗಳನ್ನು ಗುರುತಿಸಲಾಗಿದ್ದು, ಮಹಾನಗರ ಪಾಲಿಕೆಯಿಂದ ಹೂಳು ತೆಗೆಯುವ ಕೆಲಸಕಾರ್ಯಗಳಾಗುತ್ತಿವೆ. ತೆಗೆದ ಹೂಳನ್ನು ಸೂಕ್ತ ಕಡೆಗಳಲ್ಲಿ ವಿಲೇವಾರಿ ಮಾಡಲು ಸೂಚಿಸಿದ್ದೇನೆ. ಮೇ 26ರ ಒಳಗೆ ಎಲ್ಲಾ ಕಡೆಯ ಹೂಳು ತೆಗೆಯುವ ಕಾರ್ಯವನ್ನು ಪೂರ್ಣಗೊಳಿಸಲಿದ್ದೇವೆ.

— — ದರ್ಶನ್ ಎಚ್.ವಿ., ಜಿಲ್ಲಾಧಿಕಾರಿ (ಮನಪಾ ಆಡಳಿತಾಧಿಕಾರಿ)
  • ಚೇತನ್ ಪಡುಬಿದ್ರಿ