ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸಿನಿಮಾ ನಟ ದರ್ಶನ್ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಬಾರದಿತ್ತು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.
ರೇಣುಕಸ್ವಾಮಿ ಕೊಲೆ ಪ್ರಕರಣದ ಕುರಿತು ಹುಬ್ಬಳ್ಳಿಯಲ್ಲಿ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್, ವಿಡಿಯೋ ಹಾಕಿದ್ದಕ್ಕೆ ಕೊಲೆ ಯಾಕೆ ಮಾಡಬೇಕು? ಅದಕ್ಕಾಗಿಯೇ ಸೈಬರ್ ಕ್ರೖೆಮ್ ವಿಭಾಗ ಇದೆ, ಅಲ್ಲಿ ದೂರು ಕೊಡಬಹುದಿತ್ತಲ್ಲ ಎಂದರು.
ಜೈಲಿನಲ್ಲಿ ಒಬ್ಬ ಸಾಮಾನ್ಯ ಆರೋಪಿಗೆ ಯಾವ ರೀತಿ ನೋಡಿಕೊಳ್ಳಲಾಗುತ್ತದೆಯೋ ಹಾಗೇ ನೋಡಿಕೊಳ್ಳಬೇಕು. ರಾಜ ಮರ್ಯಾದೆ ಅಗತ್ಯವಿಲ್ಲ. ನಟ ಆಗಲಿ, ಸಾಮಾನ್ಯ ಜನರಾಗಲಿ ತಾರತಮ್ಯ ಆಗಬಾರದು ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಸಚಿವ ಸ್ಥಾನ ಕೈ ತಪ್ಪಿದೆ ಎಂದು ನಾನ್ಯಾಕೆ ಹೇಳಲಿ? ಜೂ. 24ರಿಂದ ಸಂಸತ್ ಅಧಿವೇಶನ ನಡೆಯಲಿದೆ. 25 ಮತ್ತು 26ರಂದು ಸಂಸತ್ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವರು ಎಂದು ತಿಳಿಸಿದರು.
ಇಳಿಸದಿದ್ದರೆ ಹೋರಾಟ:
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಈ ಹಿಂದೆ ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ತೈಲ ಬೆಲೆ ಏರಿಕೆ ಮಾಡಿದೆ. ಇಳಿಕೆ ಮಾಡದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಶೆಟ್ಟರ್ ಹೇಳಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಖಜಾನೆಯಿಂದ ಹಣ ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸಿದ್ದರಾಮಯ್ಯ ಅವರನ್ನು ಆಡಳಿತದಲ್ಲಿ ಅನುಭವಿ ವ್ಯಕ್ತಿ ಎಂದು ಹೇಳುತ್ತಿದ್ದರು. ಅವರೇ ಈಗ ವಿಫಲರಾಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದೂ ಕಷ್ಟವಾಗಬಹುದು. ಗ್ಯಾರಂಟಿ ಯೋಜನೆ ಯಾಕೆ ಮುಂದುವರಿಸುತ್ತೀರಿ ಎಂದು ಕಾಂಗ್ರೆಸ್ ಶಾಸಕರೇ ಪ್ರಶ್ನಿಸುತ್ತಿದ್ದಾರೆ.
ರಾಜ್ಯ ಸರ್ಕಾರ, ಬಿಜೆಪಿ ನಾಯಕ ಯಡಿಯೂರಪ್ಪ ಅವರ ವಿರುದ್ಧ ಷಡ್ಯಂತ್ರ ಮಾಡುತ್ತಿದೆ. ವಾಲ್ಮೀಕಿ ನಿಗಮ ಹಗರಣ, ಸಚಿವ ನಾಗೇಂದ್ರ ಅವರ ರಾಜೀನಾಮೆ ಮುಚ್ಚಿ ಹಾಕಲು ಇದನ್ನು ಮಾಡಿದೆ. ರಾಜಕೀಯ ದ್ವೇಷ ಸಾಧಿಸುವ ಉದ್ದೇಶದಿಂದ ಯಡಿಯೂರಪ್ಪ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಆರೋಪಿಸಿದರು.