ಕೆ.ಆರ್.ನಗರ: ಕುರುಬ ಸಮಾಜದ ಹಿತದೃಷ್ಟಿಯಿಂದ ಶಾಸಕ ಡಿ.ರವಿಶಂಕರ್ ನಾಯಕರಾಗಿ ಮುಂದುವರೆಯಲಿದ್ದು, ನಮ್ಮ ಕುಟುಂಬದಿಂದ ಅವರ ವಿರುದ್ಧ ಯಾರೂ ಸ್ಪರ್ಧಿಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಪಟ್ಟಣದ ಸಂಗೊಳ್ಳಿರಾಯಣ್ಣ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಕುರುಬರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಬೆಳವಣಿಗೆಗೆ ರಾಜಕೀಯ ಅಧಿಕಾರ ಪ್ರಮುಖವಾದದ್ದು. ಈ ವಿಚಾರದಲ್ಲಿ ನಡೆಯುವ ಅಪಪ್ರಚಾರಗಳಿಗೆ ಶಾಸಕರು ಕಿವಿಗೊಡಬಾರದು. 2004ರಲ್ಲಿ ಮಂಚನಹಳ್ಳಿ ಮಹದೇವ್‌ಗೆ ಸಿದ್ದರಾಮಯ್ಯ ಜೆಡಿಎಸ್ ಟಿಕೆಟ್ ನೀಡುವ ಮೂಲಕ ಸಮಾಜವನ್ನು ಒಡೆದಾಳುವ ಕೆಲಸ ಮಾಡಿದರು. ಸಮಾಜ ಮತ್ತು ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ನೀಡಿದ್ದು, ಇದಕ್ಕೆ ಕೃತಜ್ಞನಾಗಿದ್ದೇನೆ ಎಂದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಮಧುವನಹಳ್ಳಿ ಬಡಾವಣೆಯಲ್ಲಿರುವ ಟಿ.ಮರಿಯಪ್ಪ ವಿದ್ಯಾ ಸಂಸ್ಥೆ ಕಟ್ಟಡ ಶಿಥಿಲಗೊಂಡಿದೆ. ಅದನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ. ವೆಚ್ಚವಾಗಲಿದೆ. ಇದಕ್ಕಾಗಿ ಸಮಾಜದ ಎರಡು ಎಕರೆ ಜಮೀನು ಮಾರಾಟ ಮಾಡುವ ನಿರ್ಣಯವನ್ನು ಸಂಘ ಕೈಬಿಡಬೇಕು. ಜಮೀನು ಮಾರಾಟಕ್ಕೆ ಮುಂದಾದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಲಿದೆ. ಆದ್ದರಿಂದ ವಿವಿಧ ಅನುದಾನ ತಂದು ಒಂದು ವರ್ಷದೊಳಗೆ ಕಟ್ಟಡ ನಿರ್ಮಾಣ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು. ಎಚ್.ವಿಶ್ವನಾಥ್ ಮಾರ್ಗದರ್ಶನದಲ್ಲಿ ಸಮಾಜದ ಏಳಿಗೆಗೆ ಶ್ರಮಿಸುತ್ತೇನೆ ಎಂದರು.
ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ, ಜಿಪಂ ಮಾಜಿ ಸದಸ್ಯರಾದ ಜಿ.ಆರ್.ರಾಮೇಗೌಡ, ಜಯರಾಮೇಗೌಡ, ಮಾರ್ಚಹಳ್ಳಿ ಶಿವರಾಮು, ಅಮಿತ್ ವಿ.ದೇವರಹಟ್ಟಿ, ಟಿಎಪಿಸಿಎಂಎಸ್‌ನ ಮಾಜಿ ಅಧ್ಯಕ್ಷ ಎಸ್.ಸಿದ್ದೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ.ನಟರಾಜು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಉಪಾಧ್ಯಕ್ಷ ಸಾಕರಾಜು, ಪ್ರಧಾನ ಕಾರ್ಯದರ್ಶಿ ಕೆ.ಪ್ರಕಾಶ್, ಕಾರ್ಯದರ್ಶಿ ನಟರಾಜು, ಖಜಾಂಚಿ ಬಿ.ಎಂ.ಗಿರೀಶ್ ಮತ್ತು ನಿರ್ದೇಶಕರು ಹಾಜರಿದ್ದರು.