ಜಿಲ್ಲೆ

ಸುಬೇದಾರ್ ಅಪ್ಪಯ್ಯಗೌಡರ ಕೊಡುಗೆಗೆ ಯಾರು ಸರಿಸಾಟಿಯಿಲ್ಲ; ಕೆ.ಜಿ.ಬೋಪಯ್ಯ

ಮಡಿಕೇರಿ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನಗೈದ ಹುತಾತ್ಮ ಯೋಧ ಸುಬೇದಾರ್ ಅಪ್ಪಯ್ಯಗೌಡರ ಕೊಡುಗೆಗೆ ಸರಿಸಾಟಿಯಿಲ್ಲ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.


ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿರುವ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿ ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಕೊಡಗಿನ ವೀರ ಪರಂಪರೆಯಲ್ಲಿ ಹುತಾತ್ಮ ಯೋಧ ಸುಬೇದಾರ್ ಅಪ್ಪಯ್ಯಗೌಡ ಅವರ ಹೆಸರು ಅಜರಾಮರ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನಗೈದ ಅವರ ಕೊಡುಗೆಗೆ ಸರಿಸಾಟಿಯಿಲ್ಲ. ಬ್ರಿಟಿಷರ ವಿರುದ್ದ ಸಿಡಿದೆದ್ದ ವೀರ ಸೇನಾನಿ ಅಪ್ಪಯ್ಯ ಗೌಡ ಅವರನ್ನು ನಾಡಿನ ದೇಶ ದ್ರೋಹಿಗಳ ಸಹಾಯದಿಂದ ಬ್ರಿಟಿಷರು ಸೆರೆಹಿಡಿದು, ಮಡಿಕೇರಿಯ ಕೋಟೆ ಆವರಣದ ಮುಂಭಾಗದಲ್ಲಿ ೧೮೩೭ ಅ೩೧ ರಂದು ಸಾರ್ವಜನಿಕವಾಗಿ ಅವರ ಧರ್ಮಪತ್ನಿಯ ಎದುರು ಬಹಿರಂಗವಾಗಿ ಗಲ್ಲಿಗೇರಿಸಿದರು. ಇವರ ಹೋರಾಟ ಪ್ರತಿಯೊಬ್ಬರಿಗೂ ಆದರ್ಶ, ಆ ನಿಟ್ಟಿನಲ್ಲಿ ಹುತಾತ್ಮ ಯೋಧ ಸುಬೇದಾರ್ ಅಪ್ಪಯ್ಯಗೌಡ ಅವರನ್ನು ಸ್ಮರಿಸುತ್ತಿದ್ದೇವೆ ಎಂದು ಹೇಳಿದರು.


ಮಡಿಕೇರಿ ಶಾಸಕರು, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಕೊಡಗು ಗೌಡ ಸಮಾಜಗಳ ಒಕ್ಕೂಟಗಳ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಡಳಿತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಇತರರು ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು.


ಈ ಸಂದರ್ಭದಲ್ಲಿ ಭಾರತೀಯ ಸೇವಾದಳದ ರೇವತಿ ಮತ್ತು ತಂಡದವರು ಹಾಗೂ ಲಿಟ್ಲ್ ಪ್ಲವರ್ ಶಾಲೆಯ ವಿದ್ಯಾರ್ಥಿಗಳು ಗುಡ್ಡೆಮನೆ ಅಪ್ಪಯ್ಯಗೌಡರ ಕುರಿತು ನಮನ ಗೀತೆ ಹಾಡಿದರು. ನಂತರ ಮಡಿಕೇರಿ ಕೋಟೆ ಆವರಣದ ಗುಡ್ಡೆಮನೆ ಅಪ್ಪಯ್ಯಗೌಡ ಅವರನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಅಕಾಡೆಮಿ ಮಾಜಿ ಸದಸ್ಯ ಚೊಕ್ಕಾಡಿ ಪ್ರೇಮ ರಾಘವಯ್ಯ ಮತ್ತು ತಂಡದವರು ಗುಡ್ಡೆಮನೆ ಅಪ್ಪಯ್ಯ ಗೌಡರ ಕುರಿತು ಲಾವಣಿ ಪದ ಹಾಡಿದರು.


ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ತಹಶೀಲ್ದಾರ್ ಪಿ.ಎಸ್.ಮಹೇಶ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಅಕಾಡೆಮಿ ಮಾಜಿ ಸದಸ್ಯರು, ರಿಜಿಸ್ಟ್ರಾರ್ ಚಿನ್ನಸ್ವಾಮಿ ಇತರರಿದ್ದರು.