ಆಲೂರು ತಾಲೂಕಿನ ಪಾಳ್ಯ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಎಚ್.ಡಿ. ರೇವಣ್ಣ ಮಾತನಾಡಿದರು. ಶಾಸಕ ಎಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಮಂಜೇಗೌಡ ಹಾಜರಿದ್ದರು. 
ಜಿಲ್ಲೆ

ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ

ಶಿವಶಂಕರ್ ಎಂ. ಹೆಬ್ಬಳ್ಳ

ಆಲೂರು : ಜೆಡಿಎಸ್ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಇದರ ಬಗ್ಗೆ ಕನಸು ಕಾಣುತ್ತಿರುವವರು ಕೇವಲ ಹಗಲುಗನಸು ಕಾಣಬೇಕು ಎಂದು ಶಾಸಕ ಎಚ್. ಡಿ. ರೇವಣ್ಣ ಹೇಳಿದರು.
ತಾಲೂಕಿನ ಪಾಳ್ಯ ಗ್ರಾಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡರ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ನೀಡಿದ್ದರೂ ಮತದಾರರಿಂದ ತಿರಸ್ಕೃತರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಿಂದ ಪ್ರಜ್ವಲ್ ರೇವಣ್ಣ ಗೆಲ್ಲಬೇಕಿತ್ತು. ಆದರೆ ಕೆಲವರ ಕುತಂತ್ರದಿಂದ ಸೋಲು ಅನುಭವಿಸಬೇಕಾಯಿತು. ಇದನ್ನು ಬಡ್ಡಿ ಸಮೇತ ತೀರಿಸುವ ಕಾಲ ಹತ್ತಿರದಲ್ಲಿದೆ. ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯ ಕಾರ್ಯಭಾರವನ್ನು ಎಚ್.ಕೆ. ಕುಮಾರಸ್ವಾಮಿಗೆ ವಹಿಸಲಾಗುವುದು, ಪಕ್ಷದ ಸದಸ್ಯತ್ವವನ್ನು ಹೆಚ್ಚಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ತಿಳಿಸಿದರು.
ದೊಡ್ಡಕಣಗಾಲು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರಿಯಾಗಿದೆಯಾ ಸ್ಪಷ್ಟನೆ ನೀಡಿ ಎಂದು ರೇವಣ್ಣ ಅವರನ್ನು ಪ್ರಶ್ನಿಸಿದರು.
ತಾಲೂಕು ಪರಿಶಿಷ್ಟ ಜಾತಿ ಮುಖಂಡ ಅರಸಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿ ಎಸ್‌ಸಿ ಸಮುದಾಯಕ್ಕೆ ಹಣ ಕೊಡಬೇಡಿ ಎಂದು ಹೇಳಿರುವುದು ಎಷ್ಟರ ಮಟ್ಟಿಗೆ ಸರಿ, ಈ ರೀತಿಯ ನಡೆಯಿಂದಲೇ ಪಕ್ಷ ಸೋಲುತ್ತಿದೆ. ಮುಂದಾದರೂ ಪ್ರಾಮಾಣಿಕ ಕಾರ್ಯಕರ್ತರಿಗೆ ಹೆಚ್ಚಿನ ಮನ್ನಣೆ ನೀಡಿ ಎಂದರು.
ಲೋಕಸಭೆ, ವಿಧಾನಸಭೆಯಲ್ಲಿ ಸೋಲು ಕಂಡಾಗ ಮಾತ್ರ ಕರೆಯುವ ನೀವು ಅಧಿಕಾರದಲ್ಲಿದ್ದಾಗ ಏಕೆ ಕರೆಯುವುದಿಲ್ಲ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಸಿಂಗಟಗೆರೆ ಅಪ್ಪಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಸಿ.ವಿ ಲಿಂಗರಾಜು, ನಟರಾಜ್ ನಾಕಲಗೂಡು, ಮುಖಂಡರಾದ ಶಂಕರಾಚಾರ್, ಪಿ.ಎಲ್. ನಿಂಗರಾಜ್, ಕವಳಿಕೆರೆ ಹಿರಣ್ಣಯ್ಯಗೌಡ, ಕದಾಳು ರಾಜಪ್ಪಗೌಡ ಇತರರಿದ್ದರು.