ಮಂಗಳೂರು: ನಿಫಾ ವೈರಸ್ ತಗುಲಿದೆ ಎಂದು ಆತಂಕಕ್ಕೆ ಒಳಗಾಗಿ ಕಾರವಾರ ಮೂಲದ ಯುವಕನೋರ್ವ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಆಗಮಿಸಿದ್ದು, ಐಸೋಲೇಶನ್‌ನಲ್ಲಿ ಇಡಲಾಗಿದೆ. ಆ ಯುವಕನಲ್ಲಿ ನಿಫಾ ವೈರಸ್‌ನ ಯಾವುದೇ ಲಕ್ಷಣಗಳು ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಪ್ರಸ್ತುತ ಯುವಕ ಆರೋಗ್ಯದಿಂದಿದ್ದು, ಜ್ವರ, ತಲೆನೋವಿನಂಥ ಯಾವುದೇ ಲಕ್ಷಣಗಳಿಲ್ಲ. ಸ್ಥಳೀಯ ತಪಾಸಣೆಗಳಲ್ಲಿ ‘ನಾರ್ಮಲ್’ ಎಂದು ವರದಿ ಬಂದಿದೆ. ಆದರೂ ರಕ್ತ, ಮೂತ್ರ, ಮೂಗಿನ ದ್ರವ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಎರಡು ದಿನದೊಳಗೆ ವರದಿ ಬರುವ ನಿರೀಕ್ಷೆಯಿದೆ. ಜತೆಗೆ ಬಂದಿದ್ದ ಆತನ ತಂದೆಯನ್ನೂ ಐಸೋಲೇಶನ್‌ನಲ್ಲಿ ಇಡಲಾಗಿದೆ. ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಏನಿದು ಪ್ರಕರಣ?: 25ರ ಹರೆಯದ ಯುವಕ ಗೋವಾದಲ್ಲಿ ಆರ್‌ಟಿಪಿಸಿಆರ್ ಕಿಟ್ ತಯಾರಿಸುವ ಲ್ಯಾಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಚೌತಿ ಹಿನ್ನೆಲೆಯಲ್ಲಿ ಸೆ.8ರಂದು ಗೋವಾದಿಂದ ಬೈಕ್‌ನಲ್ಲಿ ಕಾರವಾರಕ್ಕೆ ಬಂದಿದ್ದಾನೆ. ದಾರಿ ಮಧ್ಯೆ ಮಳೆಯಲ್ಲಿ ಒದ್ದೆಯಾಗಿದ್ದು, ರಾತ್ರಿ ಸ್ವಲ್ಪ ಜ್ವರ ಹಾಗೂ ತಲೆನೋವು, ಹೃದಯ ಬಡಿತದಲ್ಲಿ ಏರಿಳಿತವಾಗಿತ್ತು. ಆತಂಕಗೊಂಡು ಗೂಗಲ್ ಸರ್ಚ್ ಮಾಡಿದಾಗ, ನಿಫಾ ವೈರಸ್‌ನ ಲಕ್ಷಣಗಳಿವೆ ಎಂದು ಭಾವಿಸಿದ್ದಾನೆ. ಗಾಬರಿಗೊಂಡು ಕಾರವಾರ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಂದ ಮಣಿಪಾಲಕ್ಕೆ ರೆಫರ್ ಮಾಡಿದ್ದಾರೆ. ಮಣಿಪಾಲದಿಂದ ಶನಿವಾರ ಸಾಯಂಕಾಲ ವೆನ್ಲಾಕ್‌ಗೆ ಬಂದಿದ್ದಾನೆ. ನನಗೆ ನಿಫಾ ವೈರಸ್ ತಗುಲಿದೆ ಎಂದು ವೈದ್ಯರು, ಆರೋಗ್ಯ ಇಲಾಖೆ ಸಹಿತ ಜಿಲ್ಲಾಡಳಿತವನ್ನೇ ಆತಂಕಕ್ಕೆ ಒಳಗಾಗುವಂತೆ ಮಾಡಿದ್ದಾನೆ.
ಯುವಕನ ಟ್ರಾವೆಲ್ ಹಿಸ್ಟರಿ ಪರಿಶೀಲಿಸಲಾಗಿದ್ದು, ನಿಫಾಕ್ಕೆ ಸಂಬಂಧಿಸಿ ಯಾವುದೇ ವ್ಯಕ್ತಿ, ವಸ್ತುವಿನ ಜತೆ ಆತ ಸಂಪರ್ಕಕ್ಕೆ ಬಂದಿಲ್ಲ. ಜತೆಗೆ ಆತ ಎಲ್ಲ ರೀತಿಯ ಎಸ್‌ಒಪಿಯನ್ನೂ ಪಾಲಿಸಿದ್ದಾನೆ. ಆತನೊಂದಿಗೆ ಸಂಪರ್ಕಕ್ಕೆ ಬಂದವರು, ಊರಿನಲ್ಲಿರುವ ಅಮ್ಮ ಮತ್ತು ತಂಗಿಯನ್ನೂ ಐಸೋಲೇಶನ್‌ನಲ್ಲಿ ಇರಿಸುವಂತೆ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ.
ಯುವಕನ ವಿಚಾರವಾಗಿ ಆರೋಗ್ಯ ಇಲಾಖೆ ಆಯುಕ್ತರು ಫಾಲೋಅಪ್ ಮಾಡುತ್ತಿದ್ದು, ಪುಣೆಯ ಪ್ರಯೋಗಾಲಯದಿಂದ ಶೀಘ್ರದಲ್ಲಿ ವರದಿ ಸಿಗುವ ನಿರೀಕ್ಷೆ ಇದೆ.
ಡಾ.ರಾಜೇಂದ್ರ ಕೆ.ವಿ, ದ.ಕ. ಜಿಲ್ಲಾಧಿಕಾರಿ