ಮಂಗಳೂರು: ಕಾಂಕ್ರೀಟ್ ರಸ್ತೆ ಕಾಮಗಾರಿ ವೇಳೆ ಮಹಿಳೆಯೊಬ್ಬಳು ಮಾಡಿದ ಹೈ ಡ್ರಾಮಾದಿಂದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ನನಗೆ ರಸ್ತೆಯೇ ಬೇಡವೆಂದು ಕಿರುಚಾಡಿದ ಈ ಮಹಿಳೆ ಹಚಿ ಕಾಂಕ್ರಿಟ್ ಮೇಲೆಯೇ ಮಲಗಿ ಕೆಲಸಕ್ಕೆ ಅಡ್ಡಿಪಡಿಸಿದ್ದರಿಂದ ಸ್ಥಳಕ್ಕೆ ಪೊಲೀಸರನ್ನು ಕರೆಸಬೇಕಾಯಿತು.
ಅಂದಹಾಗೆ.. ಈ ಘಟನೆ ನಡೆದಿರುವುದು ಮಂಗಳೂರು ನಗರದ ಮಣ್ಣಗುಡ್ಡ ವಾರ್ಡ್ನಲ್ಲಿ, ಸ್ಥಳೀಯ ನಿವಾಸಿ ವೈಲೇಟ್ ಪಿರೇರಾ ಎಂಬ ಮಹಿಳೆ ರಸ್ತೆ ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ.
ರಸ್ತೆ ಕಾಮಗಾರಿ ನಡೆಯುತ್ತಿರುವ ಈ ಜಾಗ ನನ್ನದು, ಇಲ್ಲಿ ನೀವೇಕೆ ರಸ್ತೆ ಹಾಕುತ್ತಿದ್ದೀರಿ ಎಂದು ರಸ್ತೆಯ ಮೇಲೆ ಮಲಗಿಬಿಟ್ಟಿದ್ದರು, ಸುಮಾರು 2 ಗಂಟೆಗಳ ಕಾಲ ಹಸಿ ಕಾಂಕ್ರಿಟ್ ಮೇಲೆಯೇ ಮಲಗಿದ್ದ ಮಹಿಳೆಯನ್ನು ಪೊಲೀಸರು ಮನವೊಲಿಸಲು ಹರಸಾಹಸವೇ ಪಡಬೇಕಾಯಿತು.
ಪೊಲೀಸರ ಮನವಿಗೂ ಮಣಿಯದ ಈಕೆಯನ್ನು ಕೆಲ ಮಹಿಳಾ ಪೊಲೀಸರೇ ಈಕೆಯನ್ನು ಹೊತ್ತು ಬೇರೆಡೆಗೆ ಸ್ಥಳಾಂತರಿಸಿದರು. ಅಲ್ಲಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನಂತರ ರಸ್ತೆ ಕಾಮಗಾರಿ ಕೆಲಸ ಪ್ರಾರಂಭವಾಗಿದೆ.
ಮಹಾನಗರ ಪಾಲಿಕೆಯಿಂದ ನಡೆಯುತ್ತಿದ್ದ ರಸ್ತೆ ಕಾಂಕ್ರಿಟೀಕರಣದ ವೇಳೆ ಈ ಘಟನೆ ನಡೆದಿದೆ. ಈ ಜಾಗ ಸದ್ಯ ಪಾಲಿಕೆ ಜಾಗವಾಗಿದ್ದು, ಇದಕ್ಕೆ ಯಾರ ಮಾಲಿಕತ್ವವೂ ಇಲ್ಲ ಎಂದು ಪಾಲಿಕೆ ಸ್ಪಷ್ಟಪಡಿಸಿದೆ. (ದಿಗ್ವಿಜಯ ನ್ಯೂಸ್)