ಜಿಲ್ಲೆ

ಯಾವ ಬ್ರ್ಯಾಂಡೂ ಬೇಡ, ಮೊದಲು ಕಸ ತೆಗೆಯಿರಿ!

 ಚನ್ನಪಟ್ಟಣ

ದಿನೇದಿನೆ ಬೊಂಬೆನಗರಿಯಲ್ಲಿ ತ್ಯಾಜ್ಯ ಸಮಸ್ಯೆ ಉಲ್ಬಣಿಸುತ್ತಿದೆ. ನಗರದ ರಸ್ತೆಯ ಇಕ್ಕೆಲಗಳೂ ಸೇರಿ ಪ್ರಮುಖ ವೃತ್ತಗಳಲ್ಲಿ ತ್ಯಾಜ್ಯ ರಾಶಿ ನಿರ್ಮಾಣವಾಗಿದೆ. ನಗರದ ಅಂದ ಕೆಡಿಸುವುದರ ತೆಗೆ ಜನತೆಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಯಾವ ಬ್ರ್ಯಾಂಡೂ ಬೇಡ., ಕಸಮುಕ್ತಗೊಳಿಸಿ ಎಂದು ಸಾರ್ವಜನಿಕರು ಕೈಜೋಡಿಸಿ ಕೇಳುವಂತಾಗಿದೆ.

ಹೌದು. ಹಲವು ವರ್ಷಗಳಿಂದ ಚನ್ನಪಟ್ಟಣವನ್ನು ತ್ಯಾಜ್ಯ ವಿಲೇವಾರಿ ಸಮಸ್ಯೆ ಕಾಡುತ್ತಿದೆ. ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿಗೆ ಸೂಕ್ತ ಜಾಗವಿಲ್ಲದ ಕಾರಣ ಚಂದದ ಪಟ್ಟಣ ಕಸದ ಪಟ್ಟಣವಾಗಿ ಮಾರ್ಪಟ್ಟಿದೆ. ಪ್ರಸ್ತುತ ಈ ಸಮಸ್ಯೆ ಹೆಚ್ಚಾಗಿದ್ದು, ನಗರದ ಬಹುತೇಕ ಕಡೆ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ತ್ಯಾಜ್ಯ ವಿಲೇವಾರಿ ಮಾಡಲು ಜಾಗವಿಲ್ಲದ ಕಾರಣ ನಗರಸಭೆ ಈ ವಿಚಾರದಲ್ಲಿ ಕೈಚೆಲ್ಲಿರುವುದು ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ.

ನಗರದಲ್ಲಿ ಲೋಡ್‌ಗಟ್ಟಲೇ ಕಸ!

ನಗರದ ತ್ಯಾಜ್ಯ ವಿಲೇವಾರಿಗೆ ನಿಗದಿತ ಜಾಗವಿಲ್ಲದ ಕಾರಣ, ಕಳೆದ ಹದಿನೈದು ದಿನಗಳಿಂದ ಕಸ ತ್ಯಾಜ್ಯ ವಿಲೇವಾರಿಗೆ ನಗರಸಭೆ ಮುಂದಾಗಿಲ್ಲ. ಹಾಗಾಗಿ ನಗರದಲ್ಲಿ ಲೋಡ್‌ಗಟ್ಟಲೇ ತ್ಯಾಜ್ಯ ಶೇಖರಣೆಗೊಂಡಿದೆ. ನಗರದಲ್ಲಿ ಪ್ರತಿನಿತ್ಯ 40 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಹಲವು ದಿನಗಳಿಂದ ತ್ಯಾಜ್ಯ ವಿಲೇವಾರಿ ಮಾಡದ ಕಾರಣ, ನಗರದೆಲ್ಲೆಡೆ ದುರ್ವಾಸನೆ ಬೀರುತ್ತಿದೆ. ನಗರದ ಅಂಚೆಕಚೇರಿ ರಸ್ತೆ, ಎಂ.ಜಿ.ರಸ್ತೆ, ಜೆ.ಸಿ.ರಸ್ತೆ, ಬಿ.ಎಂ.ರಸ್ತೆ ಸೇರಿ ಎ್ಲ ಬಡಾವಣೆಗಳಲ್ಲಿ ತ್ಯಾಜ್ಯದ ರಾಶಿ ಉಳಿದಿದೆ. ರಸ್ತೆಯಲ್ಲೆಲ್ಲ ತ್ಯಾಜ್ಯ ಹರಡಿದೆ.

ಪ್ರತಿನಿತ್ಯ ಸಾವಿರಾರು ರೋಗಿಗಳು ಭೇಟಿ ನೀಡುವ ನಗರದ ಸಾರ್ವಜನಿಕ ಆಸ್ಪತ್ರೆಯ ಹೆಬ್ಬಾಗಿಲು ಕಸಮಯವಾಗಿದೆ. ಅಲ್ಲದೆ, ಕೆಲವೆಡೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ನಗರದ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಹುಡುಕದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗಕ್ಕೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.

ವಿಲೇವಾರಿಗೆ ಜಾಗವಿಲ್ಲ!

ಅನೇಕ ವರ್ಷಗಳಿಂದ ನಗರದ ತ್ಯಾಜ್ಯ ವಿಲೇವಾರಿಗೆ ಜಾಗದ ಕೊರತೆ ಇದೆ. ಖಾಸಗಿ ಜಾಗ ಸೇರಿ

ಅಲ್ಲಲ್ಲಿ ಕಸ ವಿಲೇವಾರಿ ಮಾಡಲಾಗುತ್ತ್ತಿತ್ತು. ಈಗ ಖಾಸಗಿ ಜಾಗವೂ ಇಲ್ಲದಂತಾಗಿದೆ. ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ತಗಚಗೆರೆ ಹಾಗೂ ವಂದಾರಗುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ನಗರದ ಕಸ ವಿಲೇವಾರಿಗೆ 6.10 ಎಕರೆ ಪ್ರದೇಶಕ್ಕೆ ಅನುಮೋದನೆ ನೀಡಿದ್ದರೂ, ಆ ಜಾಗದ ಹದ್ದುಬಸ್ತು ಗುರುತಿಸುವ ಕೆಲಸವಾಗಿಲ್ಲ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ನಗರಸಭೆ ಕೈಚೆಲ್ಲಿ ಕುಳಿತಿದೆ. ಅಲ್ಲದೆ ತಾಲೂಕು ಆಡಳಿತ ಸಹಕರಿಸುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.

ಯಾವ ಬ್ರ್ಯಾಂಡೂ ಬೇಡ., ಕಸಮುಕ್ತಗೊಳಿಸಿ!

ಇತ್ತೀಚೆಗೆ ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸಿ ಬ್ರ್ಯಾಂಡ್ ಬೆಂಗಳೂರು ಮಾಡುವ ವಿಚಾರ ಮುನ್ನೆಲೆಗೆ ಬಂದಿದ್ದು, ಇದರ ಪರ ಹಾಗೂ ವಿರೋಧವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಚನ್ನಪಟ್ಟಣ-ರಾಮನಗರ ನಗರಗಳು ಕಸದಿಂದ ತುಂಬಿ ದುರ್ನಾತ ಬೀರುತ್ತಿವೆ. ಮೊದಲು ನಗರವನ್ನು ಕಸಮುಕ್ತ ಮಾಡಲು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಲಿ, ನಂತರ ಜಿಲ್ಲೆ ಹೆಸರು ಬದಲಾವಣೆ ಬಗ್ಗೆ ಚಿಂತನೆ ಮಾಡಿ ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ನಗರದ ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ತ ಜಾಗವಿಲ್ಲದಂತಾಗಿದೆ. ಜಿಲ್ಲಾಧಿಕಾರಿಗಳು ಎರಡು ಕಡೆ ಜಾಗ ಮಂಜೂರು ಮಾಡಿದ್ದು, ತಾಲೂಕು ಆಡಳಿತ ಆ ಜಾಗದ ಹದ್ದುಬಸ್ತು ಗುರುತಿಸಿಕೊಟ್ಟಿಲ್ಲ. ಇದರೊಂದಿಗೆ, ಕನ್ನಮಂಗಲ ಹಾಗೂ ಬ್ರಹ್ಮಣೀಪುರದ ಬಳಿಯೂ 15 ಎಕರೆ ಸೂಕ್ತ ಜಾಗವನ್ನು ಹುಡುಕಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದ್ಯಾವುದು ಸಹ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ತ್ಯಾಜ್ಯ ವಿಲೇವಾರಿಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.ಪುಟ್ಟಸ್ವಾಮಿ, ಪೌರಾಯುಕ್ತ, ನಗರಸಭೆ.ಕಸ ವಿಲೇವಾರಿಗೆ ಎಂದು ಜಿಲ್ಲಾಧಿಕಾರಿಗಳು ಮಂಜೂರು ಮಾಡಿರುವ ಎರಡು ಭಾಗದಲ್ಲೂ ರೈತರು ಮತ್ತು ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆ, ಜಾಗದ ಹದ್ದುಬಸ್ತು ಮಾಡಲು ಸಹ ಬಿಡುತ್ತಿಲ್ಲ. ನಗರದ ತ್ಯಾಜ್ಯದ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಪ್ರತಿನಿತ್ಯ ಸೂಕ್ತ ಜಾಗ ಹುಡುಕುವ ಯತ್ನ ನಡೆಸುತ್ತಿದ್ದೇನೆ.ಮಹೇಂದ್ರ, ತಹಸೀಲ್ದಾರ್ ಚನ್ನಪಟ್ಟಣ