ಜಿಲ್ಲೆ

ಸಿದ್ದರಾಮೋತ್ಸವದಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ; ಮಾಜಿ ಸಿಎಂ ಜಗದೀಶ ಶೆಟ್ಟರ್​

ಹುಬ್ಬಳ್ಳಿ: ಸಿದ್ದರಾಮೋತ್ಸವ ವೈಯಕ್ತಿಕವಾದ ಆಚರಣೆ. ಅದರಿಂದ ಬಿಜೆಪಿ ಸಂಟನೆಗೆ ಯಾವುದೇ ನಷ್ಟವಿಲ್ಲ. ಬದಲಾಗಿ ಕಾಂಗ್ರೆಸ್​ ಪಕ್ಷವೇ ಇದರಿಂದ ಸಮಸ್ಯೆಗೆ ಸಿಲುಕಲಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್​ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವದಲ್ಲಿ ರಾಹುಲ್​ ಗಾಂಧಿ ಸೂಚನೆ ಕೊಟ್ಟ ನಂತರ ಡಿ.ಕೆ. ಶಿವಕುಮಾರ ಅವರು ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡಿದ್ದಾರೆ. ಅವರಿಬ್ಬರೂ ವೇದಿಕೆಯಲ್ಲಿ ಒಂದಾಗಿದ್ದು ಕೇವಲ ತೋರಿಕೆಗೆ ಮಾತ್ರ ಎಂಬುದು ಸಾಬೀತಾಗಿದೆ. ಯಾವುದೇ ರೀತಿಯ ಒಗ್ಗಟ್ಟು ಅಲ್ಲಿಲ್ಲ. ಕಾಂಗ್ರೆಸ್​ನ ಆಂತರಿಕ ಕಿತ್ತಾಟ ಇನ್ನೂ ದೊಡ್ಡ ಮಟ್ಟಕ್ಕೆ ಹೋಗಲಿದೆ ಎಂದರು.
ಬಿಜೆಪಿ ಸಂಕಲ್ಪ ಯಾತ್ರೆ ಸೇರಿ ಸಾಕಷ್ಟು ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಹರಿದುಬಂದ ಉದಾಹರಣೆಯಿದೆ. ಸಿದ್ದರಾಮಯ್ಯ ಮತ್ತವರ ಬೆಂಬಲಿಗರು ಸಾಕಷ್ಟು ಖರ್ಚು ಮಾಡಿ ಕಾರ್ಯಕ್ರಮ ಮಾಡಿದ್ದಾರೆ. ರಾಷ್ಟ್ರಾದ್ಯಂತ ಕಾಂಗ್ರೆಸ್​ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕಾಂಗ್ರೆಸ್​ ಮುಕ್ತ ಭಾರತ ಸಾಕಾರವಾಗುತ್ತಿದೆ. ರಾಜ್ಯದಲ್ಲಿ 2023ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಇಲ್ಲಿನ ಆರ್ಯಭಟ ಟೆಕ್​ ಪಾರ್ರ್ಕನಲ್ಲಿ ಬಾಕಿ ಉಳಿದಿದ್ದ ನಿವೇಶನಗಳನ್ನು ಕಂಪನಿಗಳಿಗೆ ಹಂಚಿಕೆ ಮಾಡುವ ಕೆಲಸವನ್ನು ಮಾಡಲಾಗಿದೆ. ಅದರಲ್ಲಿ ಯಾವುದಾದರೂ ಕಂಪನಿಗೆ ಸಿಗದಿದ್ದರೆ, ನಿವೇಶನ ಲಭ್ಯವಿದ್ದರೆ ಸರ್ಕಾರದ ಮಟ್ಟದಲ್ಲಿ ಚಚಿರ್ಸಿ ಕ್ರಮ ವಹಿಸುತ್ತೇವೆ ಎಂದರು.
ಖಾದಿಗೆ ಮೋದಿಯಿಂದ ಮಹತ್ವ ಬಂದಿದೆ
ಪ್ರಧಾನಿ ನರೇಂದ್ರ ಮೋದಿ ಅಕಾರಕ್ಕೆ ಬಂದ ಬಳಿಕ ಖಾದಿಗೆ ಮಹತ್ವ ಬಂದಿದೆ. ಖಾದಿ ಕುಸಿದು ಬಿದ್ದಾಗ ಕಾಂಗ್ರೆಸ್​ ಯಾವುದೇ ರೀತಿ ಸ್ಪಂದನೆ ಮಾಡಿಲ್ಲ. ಈಗ ನಾಟಕ ಕಂಪನಿ ರೀತಿ ಕಾಂಗ್ರೆಸ್​ ಮುಖಂಡರು ಇಲ್ಲಿನ ಬೆಂಗೇರಿಯ ಖಾದಿ ಗ್ರಾಮೋದ್ಯೋಗಕ್ಕೆ ಹೋಗಿ ಪೋಸ್​ ಕೊಟ್ಟು ಬರುತ್ತಿದ್ದಾರೆ. ರಾಹುಲ್​ ಗಾಂಧಿಯೂ ಅಲ್ಲಿಗೆ ಹೋಗಿ ಬಂದಿದ್ದಾರೆ. ಆದರೆ, ಅಲ್ಲಿ ಏನಾಗುತ್ತಿದೆ ಎಂಬುದೇ ಅವರಿಗೆ ಗೊತ್ತಿಲ್ಲ. ಖಾದಿ ಮಹತ್ವ ಇದ್ದೇ ಇದೆ. ಕೋಟ್ಯಂತರ ಧ್ವಜ ಬೇಕಾಗಿರುವುದರಿಂದ ಅನಿವಾರ್ಯ ಕಾರಣಕ್ಕೆ ಪಾಲಿಸ್ಟರ್​ ಧ್ವಜಕ್ಕೆ ಅನುಮತಿ ನೀಡಲಾಗಿದೆ. ಆದರೂ ಈ ಬಾರಿ ಹೆಚ್ಚು ಖಾದಿ ಧ್ವಜಗಳು ಮಾರಾಟವಾಗುತ್ತಿವೆ. ರಾಜಕೀಯಕ್ಕಾಗಿ ಖಾದಿ ಹೆಸರಲ್ಲಿ ಕಾಂಗ್ರೆಸ್​ನವರು ಡ್ರಾಮಾ ಮಾಡುತ್ತಿದ್ದಾರೆ ಎಂದರು.