ಜಿಲ್ಲೆ

ನವನಗರಕ್ಕೆ ಬೇಡ ಮದ್ಯದಂಗಡಿ,   ಜನವಸತಿ, ಶಾಲಾ ವಾತಾವರಣ ಕೆಡಿಸದಂತೆ ಮನವಿ,   ಸ್ಥಳಿಯರಿಂದ ಮುಂದುವರಿದ ಪ್ರತಿಭಟನೆ

ಹುಬ್ಬಳ್ಳಿ: ಇಲ್ಲಿಯ ನವನಗರ ಮಧ್ಯ ಭಾಗದಲ್ಲಿ ಮದ್ಯದಂಗಡಿ ತೆರೆದಿರುವುದನ್ನು ವಿರೋಧಿಸಿ ಸ್ಥಳಿಯರು ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ.

ನವನಗರವು ಜನವಸತಿ ಪ್ರದೇಶವಾಗಿದ್ದು, ಪ್ರಶಾಂತ ವಾತಾವರಣ ಹೊಂದಿದೆ. ಶಾಲೆ, ಕಾಲೇಜು, ದೇವಸ್ಥಾನಗಳ ಬಳಿಯಲ್ಲಿಯೇ ಮದ್ಯದಂಗಡಿಗಳು ಆರಂಭವಾಗಿರುವುದು ಸ್ಥಳಿಯರ ನಿದ್ದೆಗೆಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವನಗರದ ಮನೆಗಳು, ದೇವಸ್ಥಾನದ ಹತ್ತಿರ ಮದ್ಯದಂಗಡಿ ಬೇಡ ಎಂದು ಒತ್ತಾಯಿಸಿ ಕಳೆದೊಂದು ವಾರದಿಂದ ನಿರಂತರ ಹೋರಾಟ ನಡೆದಿದೆ. ಮಹಿಳಾ ಮಂಡಳ ಮತ್ತು ಸಾರ್ವಜನಿಕರಿಂದ ನಿತ್ಯ ಸಂಜೆ ಪ್ರತಿಭಟನೆ ನಡೆಸಲಾಗುತ್ತಿದೆ.

ಅಂಗಡಿ ಎದುರು ನಿತ್ಯ ಪ್ರತಿಭಟನೆ ನಡೆಸಲಾಗುತ್ತಿದೆ. ಸೋಮವಾರ ಸಂಜೆ ನವನಗರದ ಎಲ್ಲ ವ್ಯಾಪಾರ ವಹಿವಾಟು ಬಂದ್ ಮಾಡುವ ಮೂಲಕ ಮುಷ್ಕರ ನಡೆಸಲಾಯಿತು.
ಮಹಾನಗರ ಪಾಲಿಕೆ ಸದಸ್ಯರು, ಶಾಸಕ ಅರವಿಂದ ಬೆಲ್ಲದ ಅವರು ಕೂಡ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ.

ನವನಗರದ ಸುಸಜ್ಜಿತ ಉದ್ಯಾನದ ಎದುರು ಒಂದು ಮದ್ಯದ ಅಂಗಡಿ ಇದೆ. ಇದೀಗ ಹೊಸದೊಂದು ಲಿಕ್ಕರ್ ಶಾಪ್ ತೆರೆಯಲಾಗಿದೆ. ನವನಗರಕ್ಕೆ ಮದ್ಯದಂಗಡಿ ಬೇಡವೇ ಬೇಡ ಎಂದು ಸ್ಥಳಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ, ಸ್ವಾಮಿ ಮಹಾಜನಶೆಟ್ಟರ್, ಮಹಿಳಾ ಮಂಡಳದ ಸದಸ್ಯರು ಪ್ರತಿಭಟನೆಯಲ್ಲಿದ್ದರು.

ನೆಮ್ಮದಿಯ ಜೀವನ ನಡೆಸುತ್ತಿರುವ ನವನಗರಕ್ಕೆ ಲಿಕ್ಕರ್ ಶಾಪ್ ಬೇಡ ಎಂದು ಹೋರಾಟ ಹಮ್ಮಿಕೊಂಡಿದ್ದೇವೆ. ಈಗಾಗಲೇ ಅನೇಕ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ್ದಾರೆ. ಸರ್ಕಾರ ಇನ್ನಾದರೂ ಕಣ್ಣು ತೆರೆದು ಮದ್ಯದ ಅಂಗಡಿ ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದು ವಿಜಯಕುಮಾರ ಅಪ್ಪಾಜಿ ಆಗ್ರಹಿಸಿದರು.